ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ವೈದ್ಯ ಡಾ. ಎನ್. ಸಂದೀಪ್ (48) ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ.
ಡಾ. ಎನ್. ಸಂದೀಪ್ ಸೇವೆಯ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನವು ಯುವ ಮತ್ತು ಮಧ್ಯವಯಸ್ಕರಲ್ಲಿ ಆತಂಕ ಹೆಚ್ಚಿಸಿದೆ.
ಅವರು ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ರಾತ್ರಿಯ ಪಾಳಿಯಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಜನರ ಪ್ರೀತಿ ಗಳಿಸಿದ್ದರು. ಸಂದೀಪ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗದೆ ದಾರಿಮಧ್ಯೆಯೇ ಅಸು ನೀಗಿದ್ದಾರೆ.
ಶಿವಮೊಗ್ಗದಲ್ಲಿ 22 ವರ್ಷದ ಮಹಿಳೆಯೊಬ್ಬರು ಇಂದು ಹೃದಯಾಘಾತ ದಿಂದ ಮೃತಪಟ್ಟಿದ್ದಾರೆ. ಹಾಸನ ಮತ್ತು ತುಮಕೂರಿನಲ್ಲಿ ಯುವಕರಿಬ್ಬರು ಹೃದಯಾಘಾತಕ್ಕೆ ಇಂದು ಬಲಿಯಾಗಿದ್ದಾರೆ.