ಬೆಂಗಳೂರು:ಆರ್ ಸಿಬಿ ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಜುಲೈ 11ರಂದು ನೀಡಿರುವ ವರದಿ ರದ್ದು ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿದೆ.
ಮೆಸರ್ಸ್ ಬಿ.ಕೆ.ಸಂಪತ್ ಕುಮಾರ್ ಅಂಡ್ ಅಸೋಸಿಯೇಟ್ಸ್ ಮೂಲಕ ಡಿಎನ್‌ಎ ಎಂಟರ್ಟೈನ್ಮೆಂಟ್ನ ನಿರ್ದೇಶಕ ಸುನಿಲ್ ಮ್ಯಾಥ್ಯೂ ಅವರು ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿ ವಿಚಾರಣೆಯು ಇಂದು ಶುಕ್ರವಾರಕ್ಕೆ ನಿಗದಿಯಾಗಿದೆ.
ವಿಚಾರಣಾ ಆಯೋಗ ದಾಖಲಿಸಿರುವ ಸಾಕ್ಷಿಗಳ ಪಾಟೀ ಸವಾಲಿಗೆ ವಿಚಾರಣಾ ಆಯೋಗ ಕಾಯಿದೆ 1952ರಲ್ಲಿ ಅವಕಾಶವಿದೆ. ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಸಾಕ್ಷಿ ನೀಡಿರುವವರ ಪಾಟೀ ಸವಾಲಿಗೆ ಅರ್ಜಿದಾರರು ಕೋರಿದ್ದು, ಇದಕ್ಕೆ ನ್ಯಾಯಮೂರ್ತಿ ಕುನ್ಹಾ ಆಯೋಗ ನಿರಾಕರಿಸಿದೆ. ಆದ್ದರಿಂದ ವಿಚಾರಣಾ ವರದಿ ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ. ತನ್ನ ಸಾಕ್ಷಿಗಳು ಮತ್ತು ಇತರೆ ಸಾಕ್ಷಿಗಳು ದಾಖಲಿಸಿರುವ ಪ್ರತಿಯನ್ನು ಕೋರಲಾಗಿದ್ದು, ಅದನ್ನು ಒದಗಿಸಲು ಆಯೋಗ ನಿರಾಕರಿಸಿದೆ.
ತನ್ನ ಮತ್ತು ತನ್ನ ಅಧಿಕಾರಿಗಳ ವಿರುದ್ಧ ಮಾತನಾಡಿರುವ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವ ಉದ್ದೇಶದಿಂದ ಸಾಕ್ಷಿ ದಾಖಲಿಸಿರುವ ಪ್ರತಿಯನ್ನು ಕೋರುವುದಕ್ಕೆ ನಿರಾಕರಿಸಲಾಗಿದೆ. ಈ ಸಂಬಂಧ ಜುಲೈ 3ರಂದು ಸಲ್ಲಿಸಿರುವ ಮೆಮೊಗೂ ಉತ್ತರಿಸಲಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಕುನ್ಹಾ ವರದಿಯಲ್ಲಿ ಅರ್ಜಿದಾರರ ನಿರ್ದೇಶಕರತ್ತ ಬೆರಳು ಮಾಡಿದೆ ಎಂಬುದಾಗಿ ವರದಿಯಾಗಿದೆ. ಈ ಪೈಕಿ ಒಬ್ಬ ನಿರ್ದೇಶಕರು ತನ್ನ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ದಾಖಲಿಸಿಲ್ಲ. ಹೀಗಾಗಿ, ಅದರ ಪ್ರತಿ ನೀಡುವಂತೆ ಕೋರಿದ್ದು, ಅದನ್ನೂ ನಿರಾಕರಿಸಲಾಗಿದೆ. ಆಕ್ಷೇಪಾರ್ಹ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ, ಅರ್ಜಿದಾರರಿಗೆ ನಿರಾಕರಿಸುವ ಮೂಲಕ ಆಯೋಗ ಪೂರ್ವ ನಿಯೋಜಿತವಾಗಿ ವರ್ತಿಸಿದೆ.
ನ್ಯಾ.ಕುನ್ಹಾ ಅವರು ಆತುರದಿಂದ ತನಿಖೆ ನಡೆಸಿರುವುದನ್ನು ನೋಡಿದರೆ ಸರ್ಕಾರವು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ. ಪ್ರಕರಣದಿಂದ ನುಣುಚಿಕೊಂಡು ಅರ್ಜಿದಾರರಂಥ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಾಲ್ತುಳಿತ ಪ್ರಕರಣವು ಕ್ರೀಡಾಂಗಣದ ಹೊರಗೆ ನಡೆದಿದ್ದು, ತಾನು ಕಾರ್ಯಕ್ರಮದ ಜವಾಬ್ದಾರಿಯನ್ನು ಕ್ರೀಡಾಂಗಣದ ಒಳಗೆ ಒಪ್ಪಿಕೊಂಡಿದ್ದು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಘಟನೆ ನಡೆದಿರುವ ಪ್ರದೇಶವು ಸರ್ಕಾರ ಮತ್ತು ಪೊಲೀಸರ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಂಬಂಧ ತಾನು ಸಲ್ಲಿಸಿರುವ ದಾಖಲೆಗಳನ್ನು ಆಯೋಗ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸರ್ಕಾರದ ಅನುಮತಿಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೊಮ್ಮೆ ಅನುಮತಿ ನಿರಾಕರಿಸಿದ್ದರೆ ಪೊಲೀಸರು ಕಾರ್ಯಕ್ರಮ ಆಯೋಜಿಸುವುದಕ್ಕೆ ತಡೆಯೊಡ್ಡಬೇಕಿತ್ತು. ಆದರೆ, ಬಂದೋಬಸ್ತ್ ಕಲ್ಪಿಸಿ, ಶುಲ್ಕ ಸಂಗ್ರಹಿಸುವುದು ಸೇರಿ ಹಲವು ಕ್ರಮಗಳನ್ನು ಅವರು ಕೈಗೊಂಡಿದ್ದರು. ಸರ್ಕಾರದ ಪ್ರಮುಖರ ಸಮ್ಮುಖದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆದಿದೆ. ಆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ.
ಸರ್ಕಾರ, ಪೊಲೀಸರು ಮಾಡಿರುವ ಟ್ವೀಟ್, ಸಂಚಾರ ದಟ್ಟಣೆಯ ಸೂಚನೆಗಳು, ಅಗ್ನಿಶಾಮಕ ದಳ ಸಿಬ್ಬಂದಿಯ ಹಾಜರಿ ಸಾಕ್ಷಿಯಾಗಿದೆ. ಹೀಗಾಗಿ, ಆಯೋಗದ ವರದಿ ಆಧರಿಸಿ ತೆಗೆದುಕೊಳ್ಳುವ ಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.