ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್ ಭಾರತಿ ಪಕ್ಷದ ಸಂಸದ ಹಾಗೂ ಹಿರಿಯ ವಕೀಲ ಎನ್.ಆರ್ ಎಲಾಂಗೊ ಅವರ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದಾರೆ.
2ನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚುನಾವಣಾ ಆಯೋಗ ಘೋಷಿಸಿದ ಬಳಿಕ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸರ್ವಪಕ್ಷ ಸಭೆ ಕರೆದಿದ್ದರು. ತಮಿಳುನಾಡು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು.
ತರಾತುರಿಯಲ್ಲಿ ಎಸ್‌ಐಆರ್ ಜಾರಿ ಮೂಲಕ ತಮಿಳುನಾಡಿನ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಪ್ರಜಾಪ್ರಭುತ್ವವನ್ನು ದಮನಿಸುವ ಉದ್ದೇಶದ ವಿರುದ್ಧ ಒಗ್ಗಟ್ಟಿನ ಧ್ವನಿ ಎತ್ತುವುದು ಎಲ್ಲಾ ಪಕ್ಷಗಳ ಕರ್ತವ್ಯ ಎಂದು ಸಿಎಂ ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲ ಮತ್ತು ಅನುಮಾನಳ ಹಿನ್ನೆಲೆ 2026ರ ವಿಧಾನಸಭಾ ಚುನಾವಣೆಯ ಸಾವಧಾನವಾಗಿ ಎಸ್‌ಐಆರ್ ನಡೆಸಬೇಕು ಎಂಬ ನಮ್ಮ ಬೇಡಿಕೆಯನ್ನು ಚುನಾವಣಾ ಆಯೋಗ ಅಂಗೀಕರಿಸದ ಕಾರಣದಿಂದ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುವ ನಿರ್ಣಯವನ್ನು ಅಂಗೀಕರಿಸಿದ್ದೇವೆ ಎಂದು ಸರ್ವ ಪಕ್ಷ ಸಭೆಯ ಬಳಿಕ ಸಿಎಂ ಸ್ಟಾಲಿನ್ ಪೋಸ್ಟ್ ಮಾಡಿದ್ದರು.
ತಮಿಳುನಾಡು ಮತ್ತು ಇತರ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಎಸ್‌ಐಆರ್ ಘೋಷಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆಗಾಗಿ ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಅಕ್ಟೋಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು.


