Menu

ಭೂ ಕಬಳಿಕೆ ಕುರಿತು ಮಾತಾಡ್ಬೇಕು ಅಂದ್ರೆ ಉತ್ತರಹಳ್ಳಿ ಬಗ್ಗೆ ಮಾತಾಡ್ಬೇಕಾಗುತ್ತೆ ಎಂದ ಡಿಕೆ ಸುರೇಶ್‌

“ಆರ್.ಅಶೋಕ್ ಅವರು ವಿರೋಧ ಪಕ್ಷದ ನಾಯಕರು. ಅವರಿಗೆ ಎಲ್ಲಾ ಮಾಹಿತಿಯನ್ನು ಪಡೆಯಲು ಯೋಗ್ಯತೆ ಮತ್ತು ಅರ್ಹತೆಯಿದೆ. ಒಂದು ವೇಳೆ ಇಲ್ಲ ಎಂದರೆ ನಾನು ಅವರಿಗೆ ಮಾಹಿತಿ ನೀಡುತ್ತೇನೆ. ಭೂ ಕಬಳಿಕೆ ಕುರಿತು ನಾನು ಮಾತನಾ ಡಬೇಕು ಎಂದರೆ ಉತ್ತರಹಳ್ಳಿಯ ಬಗ್ಗೆ ಮಾತನಾಡಬೇಕಾಗುತ್ತದೆ” ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಕನಕಪುರ ನಿರ್ದೇಶಕ ಸ್ಥಾ‌ನಕ್ಕೆ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬಿಡದಿ ಟೌನ್ ಶಿಪ್ ಕುರಿತು ಆರ್.ಅಶೋಕ್ ಸೇರಿದಂತೆ ಅನೇಕರಿಂದ ನಿಮ್ಮ ಮೇಲೆ ಭೂಕಬಳಿಕೆ ಆರೋಪದ ಕುರಿತು ಕೇಳಿದಾಗ ಹೀಗೆ ಉತ್ತರಿಸಿದರು.

ಗ್ರೇಟರ್ ಬೆಂಗಳೂರು ವಿಚಾರವಾಗಿ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ವಿರೋಧ ಪಕ್ಷಗಳು ಟೀಕೆ ಮಾಡಿದರೆ ಮಾತ್ರ ಗೌರವ ಬರುತ್ತದೆ. ಅವರ ಎಲ್ಲಾ ಟೀಕೆಗಳನ್ನು, ವಿಚಾರಗಳನ್ನು, ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮಸುಂದರ ನಗರ ನಿರ್ಮಾಣ ಮಾಡುತ್ತೇವೆ” ಎಂದು ತಿಳಿಸಿದರು.

ರೈತರ ವಿರೋಧದ ಬಗ್ಗೆ ಕೇಳಿದಾಗ, “ನಾವು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಸಿಲ್ಲ. ಈ ಹಿಂದೆ ಕುಮಾರ ಸ್ವಾಮಿ ಅವರು ಮಾಡಿದ್ದನ್ನು ಮುಂದುವರೆಸಲಾಗಿದೆ. ಕುಮಾರಸ್ವಾಮಿ ಅವರ ಆಶಯದಂತೆ ಉಪನಗರಗಳು ರಚನೆ ಯಾಗಬೇಕು ಎಂದು ಅವರದೇ ಸರ್ಕಾರದ ಅವಧಿಯಲ್ಲಿ ತೀರ್ಮಾನವಾಗಿತ್ತು. ಅದನ್ನು ನಾವು ಮುಂದುವರೆಸುತ್ತಿ ದ್ದೇವೆ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ನಮ್ಮ ಪಕ್ಷದ ಉದ್ದೇಶ ಕೂಡ ಇದಾಗಿದೆ. ಉಪಮುಖ್ಯಮಂತ್ರಿಯವರು ಆ ಭಾಗದ ರೈತರಿಗೆ ಖಂಡಿತವಾಗಿ ನ್ಯಾಯ ಒದಗಿಸಿ‌ಕೊಡುತ್ತಾರೆ. ಇದು ನಮ್ಮ ಜವಾಬ್ದಾರಿ ಕೂಡ” ಎಂದು ಹೇಳಿದರು.

ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಕನಕಪುರ ನಿರ್ದೇಶಕ ಸ್ಥಾ‌ನಕ್ಕೆ ಸ್ಪರ್ಧಿಸಿದ್ದೇನೆ” ಎಂಬುದಾಗಿ ಹೇಳಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಣ್ಣಿಟ್ಟಿದ್ದಾರಾ ಎಂದು ಕೇಳಿದಾಗ, “ಸದ್ಯಕ್ಕೆ  ಕೆಎಂಎಫ್ ವಿಚಾರ ಚರ್ಚೆಯಲ್ಲಿಲ್ಲ. ಕಳೆದ 10 ವರ್ಷಗಳಿಂದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ನಮ್ಮ ಪಕ್ಷದ ಮುಖಂಡರು ಸೇವೆ ಸಲ್ಲಿಸಿದ್ದಾರೆ. ‌ಹಾಗಾಗಿ ಇದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಅವರೆಲ್ಲರ ಜೊತೆ ಇರಬೇಕು ಎಂದು ಒತ್ತಾಯ ಮಾಡಿದ ಕಾರಣಕ್ಕೆ ಜೊತೆಯಾಗಿ ನಿಂತಿದ್ದೇನೆ” ಎಂದರು.

ನಿಮ್ಮ ಸ್ಪರ್ಧೆಯಿಂದ ಡಿ.ಕೆ ಸಹೋದರರು ಹಾಗೂ ದೇವೇಗೌಡರ ಕುಟುಂಬದ ನಡುವಣ ಹೋರಾಟ ಎಂದು ಬಿಂಬಿತವಾಗುತ್ತಿದೆ ಎಂದು ಕೇಳಿದಾಗ, “ಚರ್ಚೆ ಮಾಡುವವರು ಯಾವ ರೀತಿ ಬೇಕಾದರೂ ಚರ್ಚೆ ಮಾಡುತ್ತಾರೆ. ನಮ್ಮ ಉದ್ದೇಶ ರೈತರ ಹಿತ ಕಾಪಾಡುವುದು. ಕ್ಷೀರ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ತರಬೇಕು ಎಂಬ ರೈತರ ಇಚ್ಛೆಗೆ ಕೆಲಸ ಮಾಡಬೇಕು. ಅದನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ” ಎಂದು ಹೇಳಿದರು.

ನಿಮ್ಮ ವಿರುದ್ಧ ಅಭ್ಯರ್ಥಿ ಹಾಕುವ ಬಗ್ಗೆ ರಾಮನಗರದಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದು ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ಒಪ್ಪದ ನೀವು ಈಗ ನಿರ್ದೇಶಕ ಸ್ಥಾನಕ್ಕೆ ಒಪ್ಪಿರುವುದು ಕುತೂಹಲಕ್ಕೆ ಕಾರಣವಾಗಿ ಎಂದು ಕೇಳಿದಾಗ, “ಜಿಲ್ಲೆಯ ಶಾಸಕರು, ಮಾಜಿ ನಿರ್ದೇಶಕರು, ಅಧ್ಯಕ್ಷರುಗಳು, ಅನೇಕ‌ ಜಿಲ್ಲೆಯ ನಾಯಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ ನಾನು ಅವರ ಮಾತುಗಳಿಗೆ ಪಕ್ಷದ ಕಾರ್ಯಕರ್ತನಾಗಿ ತಲೆಬಾಗಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಸ್ವೀಕಾರ ಮಾಡಿದ್ದೇನೆ, ಕಾದು ನೋಡೋಣ” ಎಂದು ಹೇಳಿದರು.

ನೀವು ಬಯಸಿದ್ದರೆ ಪಕ್ಷದಲ್ಲಿ ದೊಡ್ಡ ಸ್ಥಾನಗಳೇ ಸಿಗುತ್ತಿದ್ದವು, ನೀವು ದಿಢೀರನೆ ಈ ಕಡೆ ಮುಖ ಮಾಡಿದ್ದೀರಿ ಎಂದು ಕೇಳಿದಾಗ, “ಸದ್ಯಕ್ಕೆ ನನಗೆ ಯಾವುದು ಬೇಡ, ನಾನು ಈಗ ಯಾವ ರೀತಿ ಕಾರ್ಯಕರ್ತರು, ಹಾಗೂ ಪಕ್ಷದ ಜತೆ ಕೆಲಸ ಮಾಡುತ್ತಿದ್ದೇನೋ ಅದೇ ರೀತಿ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಕಳೆದ ರಾತ್ರಿ 2 ಗಂಟೆವರೆಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದೆ.   ಡಿ.ಕೆ. ಶಿವಕುಮಾರ್ ಅವರು ಈ ಕ್ಷೇತ್ರದ ಭಾಗವಾಗಿರುವುದರಿಂದ ಎಲ್ಲರ ತೀರ್ಮಾನದಂತೆ ನಾನು ಅರ್ಜಿ ಸಲ್ಲಿಸಿದ್ದೇನೆ. ಇದು ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. 17 ಲಕ್ಷ ಲೀಟರ್ ಹಾಲು ಉತ್ಪಾದಿಸುತ್ತಿರುವ ರೈತರ ಬದುಕಿಗೆ ಕಾಯಕಲ್ಪ ನೀಡಲು ಈ ತೀರ್ಮಾನ ಮಾಡಲಾಗಿದೆ. ರೈತರ ಬದುಕಿನಲ್ಲಿ ಹೇಗೆ ಬದಲಾವಣೆ ತರಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಿದ್ದೇನೆ. ನಮ್ಮ ನಾಯಕರು ಹಾಗೂ ಸರ್ಕಾರದ ಜತೆ ಚರ್ಚೆ ಮಾಡಿ ನನ್ನ ಕೈಲಾದ ಮಟ್ಟಿಗೆ ರೈತರಿಗೆ ನೆರವಾಗಲು ಬದ್ಧನಾಗಿದ್ದೇನೆ” ಎಂದರು.

ಡಿ.ಕೆ. ಶಿವಕುಮಾರ್ ಅವರು ಮುಂದಿನ ಸಿಎಂ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ, “ಸದ್ಯಕ್ಕೆ  ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆ ಇಲ್ಲ. ಕರ್ನಾಟಕದ ಜನರ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಮೇಲಿದೆ. ಈಗಾಗಲೇ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಲಾಗಿದೆ. ನಾವು ಕೊಟ್ಟಿರುವ ಭರವಸೆ ಈಡೇರಿಸಿ ಅಭಿವೃದ್ಧಿ ಕಡೆ ಮುಖ ಮಾಡಿ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಣದ ನಡುವೆ ಸ್ಪರ್ಧೆಯಾಗಿದೆ ಎಂದು ಕೇಳಿದಾಗ, “ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದವರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಇಲ್ಲಿ ಯಾರ ಪರ ವಿರೋಧವಿಲ್ಲ. ಒಕ್ಕೂಟದ ಅಧ್ಯಕ್ಷ ಸ್ಥಾನ, ಚುನಾವಣೆ ಹಾಗೂ ಮತದಾನದ ಆಧಾರದ ಮೇಲೆ ನಡೆಯುತ್ತದೆ. ಅದರ ಆಧಾರದ ಮೇಲೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾರ ಬೆಂಬಲಿಗರು ಮುಂದಿದ್ದಾರೆ ಎಂದು ತೀರ್ಮಾನ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಪಕ್ಷ, ವ್ಯಕ್ತಿ ಇಲ್ಲ. ಸಹಕಾರ ಕ್ಷೇತ್ರ ಸೇವಾಮನೋಭಾವ ಇಟ್ಟುಕೊಂಡು ಕೆಲಸ ಮಾಡುವ ಕ್ಷೇತ್ರ. ಇದರಲ್ಲಿ ರಾಜಕೀಯ ಒಳ್ಳೆಯದಲ್ಲ. ಹಾಲಿನ ವ್ಯವಸ್ಥೆಯಲ್ಲಿ ರಾಜಕೀಯ ಪ್ರವೇಶವಾದರೆ ರೈತರ ಬದುಕಿಗೆ ಪೆಟ್ಟು ನೀಡುತ್ತದೆ. ಹೀಗಾಗಿ ಇಲ್ಲಿ ರಾಜಕೀಯ ಬೆರೆಸದೆ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡು ರೈತರ ಪರವಾಗಿ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣೆ ಗೆದ್ದ ಬಳಿಕ ನಮ್ಮ ಆಡಳಿತ ಮಂಡಳಿ ನಿರ್ದೇಶಕರು ಕೆಲಸ ಮಾಡಲಿದ್ದಾರೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *