ಮಂತ್ರಾಲಯ/ರಾಯಚೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಆರಂಭದಲ್ಲಿ ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದುಕೊಂಡು ಬಳಿಕ ಮೂಲ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿದ ಡಿಸಿಎಂ: ಆ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿಕೊಂಡರು.
ನಂತರ ಶ್ರೀಗಳು ಶ್ರೀಮಠದ ಪರಂಪರೆ ಹಾಗೂ ಈಗಿನ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಇದೇ ವೇಳೆ, ಶ್ರೀಗಳು ಡಿ.ಕೆ.ಶಿವಕುಮಾರ ಹಾಗೂ ಅವರ ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆ ವೇಳೆ ಮಂತ್ರಾಲಯಕ್ಕೆ ಆಗಮಿಸಿದ್ದೆ. ಅಂದು ಸಂಕಲ್ಪ ಮಾಡಿದ್ದೆ, ಆ ಬಳಿಕ ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿದೆ. ಮತ್ತೊಮ್ಮೆ ಮಂತ್ರಾಲಯಕ್ಕೆ ಬರುವಂತೆ ಆಹ್ವಾನಿಸಲಾಯಿತು. ಇದೀಗ ಮತ್ತೊಮ್ಮೆ ಗುರುರಾಯರ ಸನ್ನಿದ್ದಿಗೆ ಕುಟುಂಬ ಸಮೇತವಾಗಿ ಬಂದಿರುವೆ ಎಂದರು.
ಎಲ್ಲದಕ್ಕೂ ಗುರುಗಳ ಆರ್ಶಿವಾದ ಬೇಕು. ಹೀಗಾಗಿ ರಾಯರ ದರ್ಶನಕ್ಕೆ ಬಂದಿರುವೆ. ದೀಪಾವಳಿ ಪಾಡ್ಯ ಆಗಿರುವ ಈ ದಿನ ವಿಶೇಷವಾದದ್ದು, ಇದಕ್ಕಾಗಿ ಪೂಜೆಯಲ್ಲಿ ಭಾಗವಹಿಸುವೆ. ಅಷ್ಟೇ ಅಲ್ಲ ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಯರ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಎಲ್ಲರಿಗೂ ಹಾಗೂ ನಾಡಿಗೂ ಒಳ್ಳೆಯದಾಗಲಿ ಅಂತ ಬೇಡಿಕೊಂಡಿರುವುದಾಗಿ ತಿಳಿಸಿದರು.
ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ: ಇದಾದ ಬಳಿಕ ಪಂಚಮುಖಿ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಡಿಸಿಎಂ, ರಾಮನ ತಂದೆ ದಶರಥ ಮಹಾರಾಜರ ದೇವಸ್ಥಾನ ಎಲ್ಲೂ ಇಲ್ಲ. ಆದರೆ, ರಾಮನ ಭಂಟ ಆಂಜಿನೇಯ ಸ್ವಾಮಿ ದೇವಸ್ಥಾನಗಳು ಎಲ್ಲ ಕಡೆ ಇವೆ. ಆಂಜಿನೇಯ ಸ್ವಾಮಿ ದೊಡ್ಡ ಸಮಾಜ ಸೇವಕ. ಇಂತಹ ಸಮಾಜ ಸೇವಕನಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ್ದೇನೆ.
ದೇವಸ್ಥಾನದಲ್ಲಿನ ವ್ಯವಹಾರ ಭಕ್ತಿನಿಗೂ ಭಗವಂತನಿಗೂ ಬಿಟ್ಟದ್ದು. ಇದನ್ನು ಮಾಧ್ಯಮದವರ ಮುಂದೆ ಸಾರ್ವತ್ರಿಕಗೊಳಿಸಲಾಗುವುದಿಲ್ಲ. ನಾನುಂಟು ಆಂಜಿನೇಯ ಸ್ವಾಮಿ ಉಂಟು ಎಂದು ಮಾರ್ಮಿಕವಾಗಿ ನುಡಿದರು. ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಜಿಲ್ಲೆಯ ಶಾಸಕರು ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಇದ್ದರು.