ಡಿಸಿಎಂ ಡಿಕೆ ಶಿವಕುಮಾರ್ ದಾರಿ ತಪ್ಪಿದ ಮಗ. ಅವರು ಚಾಮುಂಡಿ, ಮಾರಮ್ಮ, ಗೌರಮ್ಮ, ರಾಘವೇಂದ್ರ ಸ್ವಾಮಿ ಎಂದು ಟೆಂಪಲ್ ರನ್ ಮಾಡುವುದರಿಂದ ಪ್ರಯೋಜನವಿಲ್ಲ. ಇಟಲಿ ಟೆಂಪಲ್ ಸುತ್ತಬೇಕು. ಅಲ್ಲಿ ಸರಿಯಾದ ಕಪ್ಪ ಕಾಣಿಕೆ ಕೊಟ್ಟು, ಪ್ರದಕ್ಷಿಣೆ ಹಾಕಿದರೆ ಮಾತ್ರ ಮುಖ್ಯಮಂತ್ರಿ ಆಗುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮಗ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ನವೆಂಬರ್ ಕ್ರಾಂತಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯತೀಂದ್ರ ಈ ವಿಚಾರ ಹೇಳಿದಾಗ ಕಾಂಗ್ರೆಸ್‌ನವರಿಗೆ ಸರಿ ಇರುತ್ತದೆ. ರಾಜಣ್ಣ ಹೇಳಿದಾಗ ಅವರನ್ನು ಓಡಿಸಿಬಿಟ್ಟರು. ಸಿದ್ದರಾಮಯ್ಯನವರೇ ಈ ಹೇಳಿಕೆ ನೀಡಿಸಿರುವುದು, ಬೆಳಗಾವಿಗೆ ಹೋಗಿ ಯತೀಂದ್ರ ಹೇಳಿದ್ದಾರೆ ಎಂದರೆ ಡಿಕೆ ಶಿವಕುಮಾರ್ ಅವರಿಗೆ ‘ಪಂಗನಾಮ’ ಪಕ್ಕಾ. ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲೂ ಸಂಪೂರ್ಣ ಫೇಲ್ಯೂರ್ ಆಗಿದೆ. ಸರ್ಕಾರದ ಯಾವ ಇಲಾಖೆಯಲ್ಲೂ ಹಣ ಇಲ್ಲ. ಬಿಜೆಪಿ ಅವಧಿಯ ಕಾಮಗಾರಿಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ನೌಕರರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಧಿಕಾರಿಗಳ ಸಾವು ಹೆಚ್ಚಿದೆ. ಸಿಎಂ ಮತ್ತು ಡಿಸಿಎಂ ಮನೆ ರಿಪೇರಿ ಹಾಗೂ ಬಳ್ಳಾರಿ ಸಾಧನಾ ಸಮಾವೇಶಕ್ಕೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಇವೆಲ್ಲವನ್ನೂ ಮರೆಮಾಚಲು ಆರೆಸ್ಸೆಸ್ ವಿಚಾರವನ್ನು ಮುಂದೆ ತಂದಿದ್ದಾರೆ ಎಂದರು.
ಸರ್ಕಾರ ಗುತ್ತಿಗೆದಾರರ ₹35 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಈ ಸರ್ಕಾರ ಬಿಹಾರ ಚುನಾವಣೆಗಾಗಿ 400 ಕೋಟಿ ರೂ. ಟಾರ್ಗೆಟ್ ಕೊಟ್ಟಿದೆ. ಯಾರು ಮಂತ್ರಿಗಳಾಗಿ ಮುಂದುವರಿಯಬೇಕು ಅವರು ₹50 ಕೋಟಿ, ₹100 ಕೋಟಿ ರೂ. ಕೊಡಬೇಕು. ದುಡ್ಡು ಕೊಟ್ಟರೆ ಮಂತ್ರಿಯಾಗಿ ಇರುತ್ತಾರೆ, ಯಾರು ಮಂತ್ರಿ ಪದವಿ ಕಳೆದುಕೊಳ್ಳುತ್ತಾರೋ ಅವರು ದುಡ್ಡು ಕೊಟ್ಟಿಲ್ಲ ಎಂದರ್ಥಎಂದು ಟೀಕಿಸಿದ್ದಾರೆ.