ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಅಭಿಮಾನಿಗಳು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆಗೆ ಸಿದ್ಧರಾಗಿರುವ ಭಕ್ತರು ಡಿಕೆ ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಜಪ, ಭಜನ ಮತ್ತು ಶ್ಲೋಕ ಪಠಣ ನಡೆಸಿ ಅವರ ರಾಜಕೀಯ ಜೀವನ ಸುಗಮವಾಗಲಿ, ಅಡೆತಡೆಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮಂಡಲ ಪೂಜೆ ಪೂರ್ಣಗೊಂಡ ನಂತರ ಶಬರಿಮಲೆ ಯಾತ್ರೆಯಲ್ಲಿ ಕೂಡ ಡಿಕೆಶಿವಕುಮಾರ್ ಸಿಎಂ ಆಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಈ ವಿಶೇಷ ಪ್ರಾರ್ಥನೆಯಲ್ಲಿ ಅಖಿಲ ಕರ್ನಾಟಕ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಹರೀಶ್ ಗೌಡ, ಎಸ್ ಎನ್ ರಾಜೇಶ್, ಅಯ್ಯಪ್ಪ ಮಾಲಧಾರಿಗಳಾದ ಯೋಗೇಶ್, ಮಂಜುನಾಥ್, ರಾಮಣ್ಣ, ಪುಟ್ಟಾಚಾರ್, ಪ್ರಮೋದ್, ರಾಹುಲ್, ವಿಜಯಕುಮಾರ್, ಪ್ರಶಾಂತ್, ಮಹದೇವಸ್ವಾಮಿ ಮತ್ತು ಇತರ ಭಕ್ತರು ಭಾಗವಹಿಸಿದ್ದರು.
ಮುಂದಿನ ಎರಡುವರೆ ವರ್ಷ ಡಿಕೆಶಿ ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿದ್ದರೆ, ಸಿದ್ದರಾಮಯ್ಯ ತಾನೇ ಪೂರ್ಣಾವಧಿ ಸಿಎಂ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಎಂ ಹುದ್ದೆಗಾಗಿನ ಸ್ಪರ್ಧೆ ಬಿರುಸುಗೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯ ಪರ ಕಾಂಗ್ರೆಸ್ನ ಹಲವು ನಾಯಕರು ಬ್ಯಾಟ್ ಬೀಸುತ್ತಿದ್ದಾರೆ.


