Menu

ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ಡಿಕೆ ಶಿವಕುಮಾರ್

dcm

ಬೆಂಗಳೂರು: “ಸಿಎಂ ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ, ಕೆಲವು ಮಾಧ್ಯಮಗಳು ಸುದ್ದಿ ತಿರುಚಿ ವಿವಾದ ಸೃಷ್ಟಿಸುತ್ತಿರುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.

ಲಾಲ್ ಬಾಗ್ ಉದ್ಯಾನದಲ್ಲಿ ಶನಿವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರೊಂದಿಗೆ ಸಂವಾದದ ಬಳಿಕ ಮಾಡಿದ ಅವರು ಮಾಧ್ಯಮಗಳು ನಾನು ಹೇಳದೇ ಇರುವ ಮಾತನ್ನು ಹೇಳಿದ್ದೇನೆ ಎಂದು ಸುಳ್ಳು ಸುದ್ದಿ ಪ್ರಕಟಿಸುತ್ತಿವೆ. ಸುಳ್ಳು ಸುದ್ದಿ ಹಾಕಿ ವಿವಾದ ಸೃಷ್ಟಿಸಿದರೆ ಮಾಧ್ಯಮಗಳ ಜೊತೆ ಮಾತನಾಡುವುದನ್ನೇ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

“ನಾನು ಸಾರ್ವಜನಿಕರ ಭೇಟಿಗೆ ಬಂದಾಗ ಕೆಲವರು ನೀವು ಮುಖ್ಯಮಂತ್ರಿ ಆಗಬೇಕು, ಅ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ ಸಿಎಂ ಆಗುವ ಕಾಲ ಹತ್ತಿರ ಬರುತ್ತಿದೆ ಎಂದು ನಾನೇ ಹೇಳಿದ್ದೇನೆ ಎಂದು ಕೆಲವು ಮಾಧ್ಯಮಗಳು ಸುದ್ದಿ ತಿದ್ದಿ ಪ್ರಸಾರ ಮಾಡುತ್ತಿವೆ. ನೀವು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬೇಡಿ” ಎಂದು ತಿಳಿಸಿದರು.

“ನಾನು ಸಿಎಂ ಹುದ್ದೆ ಅಲಂಕರಿಸಲು ಆತುರದಲ್ಲಿ ಇಲ್ಲ. ನಾನು ಇಲ್ಲಿಗೆ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು. ರಾಜಕಾರಣ ಮಾಡಲು ಅಲ್ಲ. ಜನರ ಸೇವೆ ಮಾಡಲು ಹಗಲು ರಾತ್ರಿ ತಿರುಗುತ್ತಿದ್ದೇನೆ. ನೀವು ಇದೇ ರೀತಿ ಸುದ್ದಿ ತಿರುಚುವುದಾದರೆ, ನಾನು ನಿಮಗೆ ಸಹಕಾರ ನೀಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ, ಮಾಧ್ಯಮಗೋಷ್ಠಿ ಕರೆಯುವುದೂ ಇಲ್ಲ” ಎಂದು ತಿಳಿಸಿದರು.

“ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ. ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ನಾನು ಆ ರೀತಿ ಹೇಳಿಲ್ಲ, ಅದರ ಅಗತ್ಯವೂ ನನಗೆ ಇಲ್ಲ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರೀಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆ” ಎಂದು ಹೇಳಿದರು.

“ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ” ಎಂದೂ ತಿಳಿಸಿದರು.

Related Posts

Leave a Reply

Your email address will not be published. Required fields are marked *