ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ಡಿಸಿಎಂ ಡಿಕೆ ಶಿವಕುಮಾರ್ ಸೋಮವಾರ ಸ್ಕೂಟಿ ರೈಡ್ ಹಾಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿ ಮೂಲಕ ಗಮನ ಸೆಳೆದರು.
ಸೋಮವಾರ ಬೆಳಿಗ್ಗೆ ಹೆಬ್ಬಾಳದಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಕೂಟಿಯಲ್ಲಿ ಹಿಂದೆ ಸಚಿವ ಭೈರತಿ ಸುರೇಶ್ ಅವರನ್ನು ಕೂರಿಸಿಕೊಂಡು ರೈಡ್ ಮಾಡಿದರು.
ಇದೇ ಸಂದರ್ಭದಲ್ಲಿ ಭಾನುವಾರ ಉದ್ಘಾಟನೆಗೊಳ್ಳಲಿರುವ ಮೆಟ್ರೋ ಹಳದಿ ಮಾರ್ಗದ ಚಾಲಕ ರಹಿತ ರೈಲಿನಲ್ಲಿ ಆರ್ ವಿ ರಸ್ತೆ ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಪ್ರಯಾಣ ಮಾಡಿ ಪರಿಶೀಲನೆ ನಡೆಸಿದರು.
ಹೆಬ್ಬಾಳ ಜಂಕ್ಷನ್ ಉದ್ಘಾಟನೆ ಕುರುತಾಗಿ ಮಾತನಾಡಿದ ಡಿಕೆಶಿ, “ಆಗಸ್ಟ್ 15 ರ ಒಳಗೆ ಸಿಎಂ ದಿನಾಂಕ ಪಡೆದು ಉದ್ಘಾಟನೆ ಮಾಡಲಾಗುವುದು. ಈಗ ಕೆ.ಆರ್ ಪುರಂ ನಿಂದ ಮೇಖ್ರಿ ವೃತ್ತದ ಕಡೆ ಮಾತ್ರ ಲೋಕಾರ್ಪಣೆ ಮಾಡಲಾಗುವುದು ಎಂದು ವಿವರಿಸಿದರು.
ಇನ್ನೊಂದು ಭಾಗದ ಮೇಲ್ಸೇತುವೆಯನ್ನು ಆನಂತರ ಮಾಡಲಾಗುವುದು. ಹೆಬ್ಬಾಳ ನಾಗಾವರ ಕಡೆ ಎಸ್ಟೀಮ್ ಮಾಲ್ ನಿಂದ ವಿಶ್ವವಿದ್ಯಾಲಯದ ತನಕ ಹೊಸ ಟನಲ್ ರಸ್ತೆ ಮಾಡಲಾಗುವುದು. ಇದನ್ನು ಸಧ್ಯದಲ್ಲೇ ಸಂಚಿವ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಮುಖ್ಯ ಟನಲ್ ರಸ್ತೆ ಬೇರೆ, ಈ 1.5 ಕಿಮೀ ಉದ್ದದ ಟನಲ್ ರಸ್ತೆ ಬೇರೆ ಇರಲಿದೆ. ಇದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು” ಎಂದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಆದರೆ ಕೇವಲ ಮೂರೇ ಮೆಟ್ರೋ ರೈಲುಗಳಿವೆ ಎಂದು ಕೇಳಿದಾಗ, “ಕೆಲವು ಕಾರಣಾಂತರಗಳಿಂದ ರೈಲುಗಳು ಬಂದಿಲ್ಲ. ಚೀನಾದಿಂದ ಒಂದಷ್ಟು ರೈಲುಗಳನ್ನು ತೆಗೆದುಕೊಂಡಿದ್ದರು. ಆದರೆ ಅದರಲ್ಲಿ ಒಂದಷ್ಟು ತೊಡಕುಗಳಿವೆ. ಈಗ ಇಟಾನಗರ ಸೇರಿದಂತೆ ಇತರೆಡೆಯಿಂದ ರೈಲುಗಳು ಬರಬೇಕು. ಅಲ್ಲಿಂದ ಬಂದ ನಂತರ ರೈಲು ಕಾರ್ಯಾಚರಣೆ ಅವಧಿ ಹೆಚ್ಚಳ ಮಾಡಲಾಗುವುದು” ಎಂದರು.