Thursday, October 16, 2025
Menu

ಡಿಕೆ ಶಿವಕುಮಾರ್‌ ಅಧಿಕಾರ ಕೊಡದಿದ್ದರೆ ದಾರಿಯೇ ಬೇರೆ ಎಂದಿದ್ದಾರೆ: ಆರ್‌.ಅಶೋಕ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಪಡೆಯುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಕ್ಷದ ಹಿರಿಯ ನಾಯಕರಿಗೆ ಬೆದರಿಕೆಯ ಸಂದೇಶ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆದರಿಸಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಕರೆ ಬಂದಿದೆ ಎಂದು ಹೇಳಿದ್ದಾರೆ. ನವೆಂಬರ್‌ ಕ್ರಾಂತಿಯ ಸಮಯದಲ್ಲೇ ಈ ರೀತಿ ಮಾತಾಡುತ್ತಿದ್ದಾರೆ. ಅವರಿಗೆ ಯಾರು ಫೋನ್‌ ಮಾಡಿದ್ದರು ಎಂಬುದನ್ನು ವಿವರವಾಗಿ ತಿಳಿಸಲಿ. ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಉದ್ದೇಶದಿಂದ ಅವರು ಪಕ್ಷದ ಹಿರಿಯರಿಗೆ ಧಮಕಿ ಹಾಗೂ ಸವಾಲು ಹಾಕುತ್ತಿದ್ದಾರೆ. ಅಧಿಕಾರ ಹಸ್ತಾಂತರದ ಸಮಯದಲ್ಲೇ ಈ ಹೇಳಿಕೆ ನೀಡಿದ್ದಾರೆ. ಅವರು ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತಾರೆ ಎಂದು ಈಗಾಗಲೇ ಹೇಳಿದ್ದಾರೆ. ಅವರನ್ನು ಸಿಎಂ ಮಾಡಲಿ ಎಂದೇ ಈ ರೀತಿಯ ಸಂದೇಶ ನೀಡಿದ್ದಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಾಸನಾಂಬೆ ಎರಡು ಹೂ ನೀಡಿದ್ದಾಳೆ. ಆ ಹೂವನ್ನು ಪಡೆದು ಜೇಬಿನಲ್ಲಿಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ದೇವಿ ವರ ಕೊಟ್ಟಿಲ್ಲ. ಈ ಹೂವಿನ ಮಹಾತ್ಮೆ ನವೆಂಬರ್‌ ಕ್ರಾಂತಿಯಲ್ಲಿ ತಿಳಿದುಬರಲಿದೆ. ಇವರಿಬ್ಬರೂ ಹಾಸನಾಂಬೆಗೆ ಪರೀಕ್ಷೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಜನರಿಗೆ 30 ಸಾವಿರ ಉದ್ಯೋಗ ನೀಡುವ ಉದ್ಯಮ ಆಂಧ್ರಪ್ರದೇಶದ ಪಾಲಾಗಿದೆ. ಇವರು ಕೇವಲ ಆರ್‌ಎಸ್‌ಎಸ್‌ ಬಗ್ಗೆ ಮಾತಾಡಿಕೊಂಡು ಕಾಲಹರಣ ಮಾಡಿದ್ದಾರೆ. ಆ ಕಂಪನಿ ಬೆಂಗಳೂರಿಗೆ ಬಂದಿದ್ದರೆ ಖಜಾನೆಗೆ ಆದಾಯ ಬರುತ್ತಿತ್ತು. ಕಂಪನಿಗಳೆಲ್ಲ ಬಿಟ್ಟುಹೋದರೆ ಕಾಂಗ್ರೆಸ್‌ ಪಕ್ಷ ಏಕೆ ಅಧಿಕಾರದಲ್ಲಿ ಇರಬೇಕು? ನಗರದ ಕಸ, ರಸ್ತೆ ಗುಂಡಿ ನೋಡಿದರೆ ಯಾವ ಕಂಪನಿಗಳೂ ಇಲ್ಲಿ ಇರಲು ಇಷ್ಟಪಡುವುದಿಲ್ಲ. ಸಚಿವ ಪ್ರಿಯಾಂಕ್‌ ಖರ್ಗೆಗೆ ಸಿಎಂ ಸಿದ್ದರಾಮಯ್ಯ ಹೇಳಿ ಪತ್ರ ಬರೆಸಿದ್ದಾರೆ ಎಂದರು.

ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನಲ್ಲಿ ಭಾಗವಹಿಸಬಾರದು ಎಂದರೆ, ನಾನು ಕೂಡ ಸರ್ಕಾರ ನೌಕರನೇ ಆಗಿದ್ದೇನೆ ಎನ್ನಬಹುದು. ನನ್ನಂತಹ ಅನೇಕರು ಆರ್‌ಎಸ್‌ಎಸ್‌ನಲ್ಲಿದ್ದಾರೆ. ಸರ್ಕಾರಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಕನ್ಹೇರಿ ಸ್ವಾಮೀಜಿ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿರುವುದು ತಪ್ಪು. ಇನ್ನು ಎಲ್ಲ ಸ್ವಾಮೀಜಿಗಳ ವಿರುದ್ಧವೂ ಇದೇ ರೀತಿ ಕ್ರಮ ಕೈಗೊಳ್ಳುತ್ತಾರೆ. ಪಾಕಿಸ್ತಾನದಿಂದಲೂ ಬಂದವರು ಇಲ್ಲಿ ಕಾರ್ಯಕ್ರಮ ಮಾಡಬಹುದು. ಹಿಂದೂಗಳನ್ನು ಕಂಡರೆ ಇವರಿಗೆ ಆಗಲ್ಲ ಎಂದರು.

ಜಾತಿ ಸಮೀಕ್ಷೆಯಲ್ಲಿ ಜನರ ಎಲ್ಲ ಮಾಹಿತಿ ಪಡೆಯಲಾಗುತ್ತಿದೆ. ಒಂದು ವೇಳೆ ಜನರ ಬ್ಯಾಂಕ್‌ ಖಾತೆಯಿಂದ ಹಣ ಹೋದರೆ ಅದಕ್ಕೆ ಸರ್ಕಾರವೇ ಕಾರಣವಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಯಾರೂ ನೀಡಬಾರದು. ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸುತ್ತಿದ್ದಾರೆ. 15 ದಿನಕ್ಕೆ ಸಮೀಕ್ಷೆ ಆಗಲ್ಲ ಎಂಬುದು ಸರ್ಕಾರಕ್ಕೆ ತಿಳಿದಿರಬೇಕಿತ್ತು. ಇದರಿಂದ ಶಾಲಾ ಮಕ್ಕಳ ವ್ಯಾಸಂಗ ಹಾಳಾಗಿದೆ ಎಂದರು.

Related Posts

Leave a Reply

Your email address will not be published. Required fields are marked *