ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ವಿಚಾರವಾಗಿ ನ್ಯಾಯಾಲಯದಿಂದ ಸ ದ್ಯದಲ್ಲೇ ಸೂಚನೆ ಬರುವ ಸಾಧ್ಯತೆ ಇದೆ. ಬೆಂಗಳೂರು ನಗರ ಪಾಲಿಕೆ ಚುನಾವಣೆ ಯನ್ನು ನಡೆಸಬೇಕಾಗಿದ್ದು ಗ್ರೇಟರ್ ಬೆಂಗಳೂರು ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆಗಳ ಸಿದ್ಧತೆಗಾಗಿ ಕಾರ್ಯಾಧ್ಯಕ್ಷರ ನೇತೃತ್ವ ದಲ್ಲಿ ಉಪಾಧ್ಯಕ್ಷರನ್ನು ಸೇರಿಸಿಕೊಂಡು ವಿಭಾಗವಾರು ಸಮಿತಿ ರಚಿಸಲಿದ್ದೇವೆ. ಈ ಸಮಿತಿ ಮಾರ್ಚ್ ಒಳಗಾಗಿ ರಾಜ್ಯ ಪ್ರವಾಸ ಮಾಡಿ ಎಲ್ಲಾ ಕಡೆ ಸಮನ್ವಯತೆ ಸಾಧಿಸಿ ತಯಾರಿ ಮಾಡಿಕೊಳ್ಳಬೇಕು. ನಾಯಕರ ಮಧ್ಯೆ ಹೊಂದಾಣಿಕೆ ಸಾಧಿಸಿ 50% ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡುವ ಬಗ್ಗೆ ವರದಿ ಸಲ್ಲಿಸ ಬೇಕು ಎಂದು ತಿಳಿಸಿದ್ದಾರೆ.
100 ಕಾಂಗ್ರೆಸ್ ಕಚೇರಿ ನಿರ್ಮಿಸುವ ಹಿನ್ನೆಲೆಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ನಮ್ಮ ನಾಯಕರಾದ ಮಲ್ಲಿ ಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇನೆ. ಈ ಕಾರ್ಯಕ್ಕೆ ನಾಲ್ಕು ವಿಭಾಗಗಳಲ್ಲಿ ಸಮಿತಿ ರಚಿಸಲಾಗಿದೆ. ಕಚೇರಿ ಕಟ್ಟಡ ನಿರ್ಮಾಣ ಮಾಡುವ ಜಾಗ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನೋಂದಣಿ ಆಗದಿದ್ದರೆ ಶಂಕುಸ್ಥಾಪನೆ ಮಾಡಿಸುವುದಿಲ್ಲ. ಈ ಕಟ್ಟಡ ನಿರ್ಮಾಣದ ಜಾಗ ವೈಯಕ್ತಿಕ ಹೆಸರು, ಬೇರೆ ಟ್ರಸ್ಟ್ ಹೆಸರಿನಲ್ಲಿ ಇರುವಂತಿಲ್ಲ. ಇನ್ನು ಆನಂದರಾವ್ ವೃತ್ತದ ಬಳಿ ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಸಂಬಂಧಿಸಿದಂತೆ ಶಾಸಕರು ಸಂಪರ್ಕದಲ್ಲಿ ಇದ್ದಾರಾ ಎಂದು ಕೇಳಿದಾಗ, ಇದು ಗೌಪ್ಯವಾದ ವಿಚಾರ. ಇದನ್ನು ಬಹಿರಂಗಪಡಿಸು ವುದಿಲ್ಲ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯ ನಮ್ಮ ನಾಯಕರು, ಅವರ ಹೆಸರು ದುರ್ಬಳಕೆ ಬೇಡ
ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ದಿನಬೆಳಗಾದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಪಕ್ಷಕ್ಕೆ ಅನಿವಾರ್ಯ ಎಂಬ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನ ಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರು ಎರಡನೇ ಬಾರಿಗೆ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ ಎಂದರು. ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ ಎಂದು ಕೇಳಿದಾಗ, ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನು ಗಮನಿಸುತ್ತಿದೆ ಎಂದು ಉತ್ತರಿಸಿದರು.
ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ
ನೀರಾವರಿ ವಿಚಾರವಾಗಿ ಪಕ್ಷಾತೀತ ಹೋರಾಟ ಮಾಡಬೇಕು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜ್ಯದ ನೆಲ, ಜಲ ಹಿತಕ್ಕಾಗಿ ನಾವು ಬದ್ಧವಾಗಿ ದ್ದೇವೆ. ಅವರು ಮೇಕೆದಾಟಿಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ಹೇಳಿದ್ದರು. ಮಹದಾಯಿ ವಿಚಾರವಾಗಿ ನಾನೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಇದು ಅವರ ಹೋರಾಟವಲ್ಲ. ರಾಜ್ಯದ ಹೋರಾಟ. ಅವರು ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ ಮಾಡಬೇಕು, ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ರಾಜ್ಯದ ಹಿತಕ್ಕಾಗಿ ನೀರಾವರಿ ಯೋಜನೆಗೆ ಪ್ರಯತ್ನಿಸುತ್ತೇವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ, ಅದನ್ನು ಕೊಟ್ಟಿಲ್ಲ ಎಂದು ಅವರು ಸಂಸತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ, ದೇವೇಗೌಡರು, ಕುಮಾರಸ್ವಾಮಿ ಮೊದಲು ಈ ಕೆಲಸ ಮಾಡಲಿ. ಕಾವೇರಿ ಗೋದಾವರಿ ಜೋಡಣೆ ಮಾಡಿದರೆ ಸಂತೋಷ. ಅವರು ಯೋಜನೆ ತರಲಿ. ನಾವು ಸಹಕಾರ ನೀಡುತ್ತೇವೆ ಎಂದಿದ್ದಾರೆ. ಬೆಂಗಳೂರಿನ ನೀರಿನ ವಿಚಾರವಾಗಿ ಮಾತನಾಡಿದ್ದಾರೆ ಎಂದು ಕೇಳಿದಾಗ, ಅವರ ಪಕ್ಷದ ನಾಯಕರಿಂದ ಗೊಂದಲದ ಹೇಳಿಕೆ ಕೊಡಿಸುತ್ತಿದ್ದಾರೆ. ಡಿ.ಸಿ ತಮ್ಮಣ್ಣ ಅವರಿಗೆ ಮಾಹಿತಿ ಇಲ್ಲ. ಈ ವಿಚಾರದಲ್ಲಿ ಡಿಪಿಆರ್ ಸಿದ್ಧಪಡಿಸಿದ್ದಾರೆ ಅಷ್ಟೇ. ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಮಂಜೂರು ಮಾಡಿದ್ದೇನೆ. ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.