ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ಉಪಹಾರ ಸೇವಿಸಿದ್ದು, ಸುಮಾರು 1 ಗಂಟೆ 20 ನಿಮಿಷಗಳ ಉಪಹಾರದ ವೇಳೆ ಸಿಎಂ ನೆಚ್ಚಿನ ನಾಟಿ ಕೋಳಿ ವಿಶೇಷವಾಗಿತ್ತು.
ಸಿಎಂ ನಿವಾಸದಲ್ಲಿ ಉಪಹಾರ ಸೇವಿಸಿದ ನಂತರ ಡಿಕೆ ಶಿವಕುಮಾರ್ ಆಹ್ವಾನದ ಮೇರೆಗೆ ಅವರ ನಿವಾಸದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ರಾಜಕೀಯ ವಿಷಯ ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಮತ್ತೊಂದು ಉಪಹಾರ ಸಭೆಯಲ್ಲೂ ಒಗ್ಗಟ್ಟು ಪ್ರದರ್ಶನ ಕಂಡುಬಂತು. “ನಾವು ಯಾವಾಗಲೂ ಬ್ರದರ್ಸ್, ಒಂದೇ ಸಿದ್ಧಾಂತವನ್ನು ಒಪ್ಪಿಕೊಂಡಿದ್ದೇವೆ, ನಾವು ಒಟ್ಟಾಗಿದ್ದೇವೆ” ಎಂದು ಸಿಎಂ ಸಿದ್ದರಾಮಯ್ಯ ಉಪಹಾರದ ಬಳಿಕ ಹೇಳಿದರು.
1 ಗಂಟೆ 20 ನಿಮಿಷ ಚರ್ಚೆ
ಉಪಹಾರದ ವೇಳೆ ಸಿಎಂ ಮತ್ತು ಡಿಸಿಎಂ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಉಪಹಾರದ ಮೆನುವಿನಲ್ಲಿ ನಾಟಿಕೋಳಿ: ಉಪಹಾರದ ಮೆನುವಿನಲ್ಲಿ ನಾಟಿ ಕೋಳಿ ಸ್ಪೆಷಲ್ ಐಟಂ ಆಗಿತ್ತು. ಮೈಸೂರು ಶೈಲಿಯ ಉಪಹಾರವನ್ನು ತಯಾರಿಸಲಾಗಿತ್ತು.
ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಡಿಕೆಸುರೇಶ್
ಇದಕ್ಕೂ ಮುನ್ನ, ಬೆಳಗ್ಗೆ 9.30ಕ್ಕೆ ಸದಾಶಿವನಗರದ ಡಿಕೆಶಿ ಮನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯರನ್ನು ಡಿಕೆ ಬ್ರದರ್ಸ್ ಆತ್ಮೀಯವಾಗಿ ಬರಮಾಡಿಕೊಂಡರು. ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಸಿಎಂ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು.
ಬ್ರೇಕ್‌ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟಾಗಿ ಮನೆಯಿಂದ ಹೊರಬಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಡಿಕೆಶಿಯವರು ನನ್ನನ್ನು ಉಪಹಾರಕ್ಕೆ ಕರೆದಿದ್ದರು. ಉಪಹಾರ ಮಾಡಿದ್ದೇನೆ. ನಾನು ಮಾಂಸಹಾರಿ, ಇವರು ಸಸ್ಯಹಾರಿ. ನಾನು ಅದಕ್ಕೆ ನನ್ನ ಮನೇಲಿ ವೆಜ್ ಮಾಡಿಸಿದ್ದೆ. ನಾನು ಡಿಕೆಶಿಗೆ ಹಳ್ಳಿಯಿಂದ ಕೋಳಿ ತರಿಸುವಂತೆ ಹೇಳಿದ್ದೆ ಎಂದರು.
“ಪಕ್ಷದ ವಿಚಾರಗಳನ್ನು ಚರ್ಚಿಸಿದ್ದೇವೆ. ಡಿ.8ರಂದು ಬೆಳಗಾವಿ ಅಧಿವೇಶನ ಶುರುವಾಗುತ್ತದೆ. ಅಲ್ಲಿ ನಮ್ಮ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾವ ಯಾವ ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಸಮಾಲೋಚಿಸಿದ್ದೇವೆ. ವಿಪಕ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತದೆ ಎಂಬ ವರದಿ ಇದೆ. ಅದನ್ನು ನಾವು ಒಟ್ಟಾಗಿ ಎದುರಿಸುತ್ತೇವೆ. ಅಧಿವೇಶನದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೇವೆ. ಕಬ್ಬು ವಿಚಾರ, ಕೃಷಿ, ಮೆಕ್ಕೆಜೋಳದ ಸಮಸ್ಯೆ ನಿವಾರಿಸಲು ಯತ್ನಿಸಿದ್ದೇವೆ. ಸರ್ಕಾರ ರೈತರ ಪರವಾಗಿದೆ. ಕಬ್ಬು ಬೆಳೆಗಾರರ ಜೊತೆ ಮಾತನಾಡಿದ್ದೇನೆ. ಅದಕ್ಕೆ ಅಂತಿಮ ರೂಪ ಕೊಡಲು ಯತ್ನಿಸಿದ್ದೇನೆ” ಎಂದು ಹೇಳಿದರು.
“ರಾಜ್ಯದ ಸಂಸದರ ಜೊತೆ ಸಭೆ ನಡೆಸುವ ಬಗ್ಗೆ ಮಾತನಾಡಿದ್ದೇವೆ. ಡಿ.8ರಂದು ಬೆಳಗಾವಿ ಅಧಿವೇಶನದಲ್ಲಿ ಸಂತಾಪದ ಬಳಿಕ ಕಲಾಪ ಮುಂದೂಡಿಕೆಯಾದರೆ ಅಂದೇ ದೆಹಲಿಗೆ ಹೋಗಿ ರಾಜ್ಯದ ಸಂಸದರ ಜೊತೆ ಸಭೆ ನಡೆಸುವ ಚಿಂತನೆ ಇದೆ. ಈ ವೇಳೆ ಸಮಯ ಕೊಟ್ಟರೆ ಹೈಕಮಾಂಡ್ ಭೇಟಿ ಮಾಡುತ್ತೇನೆ. ಕೆ.ಸಿ.ವೇಣುಗೋಪಾಲ್, ನಾನು ನಾಳೆ ಮಂಗಳೂರು ಕಾರ್ಯಕ್ರಮದಲ್ಲಿ ಭೇಟಿಯಾಗುತ್ತೇವೆ” ಎಂದು ತಿಳಿಸಿದರು.
ಈವರೆಗೆ ಹೈಕಮಾಂಡ್ ಜೊತೆ ಯಾವುದೇ ಮಾತುಕತೆ ನಡೆದಿಲ್ಲ- ಸಿಎಂ: “ದಿಲ್ಲಿಯಲ್ಲಿ ಚರ್ಚೆ ಮಾಡಿದ್ದೇನೆ. ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ. ಅದೇ ರೀತಿ ರಾಹುಲ್ ಗಾಂಧಿ ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಈಗಾಗಲೇ ಹೇಳಿದ್ದೇವೆ. ಈವರೆಗೆ ಹೈಕಮಾಂಡ್ ಜೊತೆ ಯಾವುದೇ ಕಮ್ಯುನಿಕೇಷನ್ ಆಗಿಲ್ಲ” ಎಂದರು.
“ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗಿ ಇದ್ದಾರೆ. ಒಟ್ಟಾಗಿ ವಿಪಕ್ಷವನ್ನು ಎದುರಿಸಲಿದ್ದಾರೆ. ನಾವು ಯಾವಾಗಲೂ ಬ್ರದರ್ಸ್, ಒಂದೇ ಸಿದ್ದಾಂತವನ್ನು ಒಪ್ಪಿಕೊಂಡಿದ್ದೇವೆ. ನಾವು ಒಟ್ಟಾಗಿದ್ದೇವೆ. 2028ರಲ್ಲೂ ಒಟ್ಟಿಗೆ ಕೆಲಸ ಮಾಡಿ ಚುನಾವಣೆ ಗೆಲ್ಲುತ್ತೇವೆ. ನಾನು ಡಿಸಿಎಂ ಒಟ್ಟಾಗಿ ಸರ್ಕಾರ ಮಾಡುತ್ತೇವೆ. ಮುಂದೆನೂ ಸರ್ಕಾರ ನಡೆಸುತ್ತೇವೆ” ಎಂದು ಸ್ಪಷ್ಟಪಡಿಸಿದರು.


