ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನ ಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118 ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನ ಮಂತ್ರಿ ಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕ ರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳಎಂದು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಮನುಷ್ಯತ್ವ ಮೋಕ್ಷಕ್ಕೆ ಮೂಲ. ಹೀಗೆ ಮನುಷ್ಯತ್ವದ ಪ್ರತಿರೂಪವಾದ ಶಿವಕುಮಾರ ಸ್ವಾಮೀಜಿ ಅವರನ್ನು ನೆನೆಸಿಕೊಂಡು, ಅವರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ನಾವು ಇಲ್ಲಿ ಸೇರಿದ್ದೇವೆ ಎಂದರು.
ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆ ಎಂದರು.
ನಾನು ಧರ್ಮ, ದೇವರ ಮೇಲೆ ನಂಬಿಕೆ ಇಟ್ಟುಕೊಂಡಿರುವವನು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ, ದೇವ ನೊಬ್ಬ ನಾಮ ಹಲವು. ನಮ್ಮ ಮನಸ್ಸಿಗೆ ಶಾಂತಿ ಸಿಗಬೇಕು ಎಂದು ನಾವು ಈ ಮಠಕ್ಕೆ ಆಗಮಿಸಿ ಶ್ರೀಗಳನ್ನು ಸ್ಮರಿಸು ತ್ತಿದ್ದೇವೆ ಎಂದು ಹೇಳಿದರು.
ಶ್ರೀಗಳು ಹಾಕಿಕೊಟ್ಟ ಹಾದಿ, ಅವರ ಆಚಾರ ವಿಚಾರ, ಅವರ ನುಡಿಮುತ್ತುಗಳು ನಮ್ಮ ಬದುಕಿಗೆ ಶಕ್ತಿ ತುಂಬುತ್ತವೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಆಗಮಿಸಿದ್ದೆ. ಇಲ್ಲಿನ ಅನ್ನದಾಸೋಹ ಕಾರ್ಯಕ್ರಮ ನೋಡಿ ಎಸ್.ಎಂ. ಕೃಷ್ಣ ಅವರು ವಾಪಸ್ ತೆರಳುವಾಗ ಮಹತ್ವದ ನಿರ್ಧಾರ ಮಾಡಿದರು. ಸಿದ್ದಗಂಗಾ ಮಠದ ಅನ್ನದಾಸೋಹ ಕಾರ್ಯಕ್ರಮ ನಮ್ಮ ಸರ್ಕಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಬೇಕು ಎಂದು ರಾಜ್ಯಾ ದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ʼಮಧ್ಯಾಹ್ನದ ಬಿಸಿಯೂಟ ಯೋಜನೆʼ ಆರಂಭಿಸಿದರು ಎಂದು ಸ್ಮರಿಸಿ ದರು.
ನಾವು ತಿನ್ನುವ ಅನ್ನ, ಬೇಯಿಸುವ ನೀರು, ನಮ್ಮ ದುಡಿಮೆಯ ಬೆವರಾಗಬೇಕೇ ಹೊರತು, ಬೇರೆಯವರ ಕಣ್ಣೀರಾಗ ಬಾರದು ಎಂದು ಶಿವಕುಮಾರಸ್ವಾಮೀಜಿ ಹೇಳಿದ್ದರು. ಶ್ರೀಗಳು ಬಸವಣ್ಣನವರ ಅನುಯಾಯಿಯಾಗಿ ಜಾತಿ, ಧರ್ಮದ ತಾರತಮ್ಯವಿಲ್ಲದೇ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ ಎಂದರು.
ಧರ್ಮ ಎಂದರೆ ಮನುಷ್ಯತ್ವ. ಮನುಷ್ಯತ್ವ ರೂಪಿಸುವ ಪವಿತ್ರ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ, ಮೇಲು ಕೀಳು ತಾರತಮ್ಯವಿಲ್ಲ. ಹೀಗಾಗಿ ಈ ಮಠಕ್ಕೆ ದೊಡ್ಡ ಹೆಸರಿದೆ. ಇದನ್ನು ನಾವು ನೀವು ಉಳಿಸಿಕೊಂಡು ಹೋಗಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಅನ್ನ ಕೊಟ್ಟು, ಅಕ್ಷರ ಕಲಿಸಿದ ಮಹಾಚೇತನರಿಗೆ ನಾವು ಇಂದು ನಮಿಸಲು ಬಂದಿದ್ದೇವೆ. ನಾನು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಷಕರು ನನಗೆ ಒಂದು ಕತೆ ಹೇಳಿದ್ದರು. ಅಲೆಕ್ಸಾಂಡರ್ ಭಾರತವನ್ನು ಗೆಲ್ಲಲು ಆಕ್ರಮಣ ಮಾಡುವ ಮುನ್ನ ಗುರುಗಳನ್ನು ಭೇಟಿ ಮಾಡಲು ಹೋದಾಗ, ಅವರ ಗುರು ಒಂದು ಮಾತು ಹೇಳಿದರು. ಭಾರತದಿಂದ ನೀನು ಬರುವಾಗ ರಾಮಾಯಣ, ಮಹಾಭಾರತ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ತತ್ವಜ್ಞಾನಿಯನ್ನು ನಿನ್ನ ಜತೆ ತೆಗೆದು ಕೊಂಡು ಬಾ, ಈ ಐದು ವಸ್ತುಗಳನ್ನು ನೀನು ತಂದರೆ ಇಡೀ ಭಾರತವನ್ನು ಗೆದ್ದುಕೊಂಡು ಬಂದಂತೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇಡೀ ವಿಶ್ವದ ಜನ ನಮ್ಮ ಆಚಾರ ವಿಚಾರಗಳನ್ನು ನಂಬಿ ಶರಣಾಗಿ ದ್ದಾರೆ ಎಂದರು.