ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವವರಿಗೆ ಡಿಸಿಎಂ ಮಾರುತ್ತರ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವ ಮೂಲಕ ನಮ್ಮ ದೇಶದ ಸಾಂಸ್ಕೃತಿಕ ಎಳೆಯನ್ನು ಇನ್ನಷ್ಟು ಬಲಪಡಿಸಿದ್ದಾರೆ. ಕೀಳು ಮಟ್ಟದ ಪಕ್ಷ ರಾಜಕೀಯ ಮಾಡುವ ಕೆಲವರಿಗೆ ಸೂಕ್ತ ಉತ್ತರ ನೀಡುವುದರ ಜೊತೆ, ಭಾರತದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮೃದ್ಧಿಯನ್ನು ಬಲಪಡಿಸಿದ್ದಾರೆ.
ಭಾರತೀಯ ಪರಂಪರೆಯ ಮಹತ್ವವನ್ನು ಒತ್ತಿ ಹೇಳುವ ಕುಂಭಮೇಳದ ಭೇಟಿಯು ಡಿ.ಕೆ.ಶಿವಕುಮಾರ ಅವರು ಪಾಲಿಸಿಕೊಂಡ ಬಂದ ಕೆಲವು ತತ್ವಗಳು ರಾಜಕೀಯ ದೃಷ್ಟಿಕೋನಕ್ಕೆ ಸೀಮಿತವಾಗಿರದೆ ಭಾರತೀಯ ಪರಂಪರೆ, ಆಚಾರ ವಿಚಾರ, ಜನ ಜೀವನದಲ್ಲಿ ಹಾಸು ಹೊಕ್ಕಾಗಿರುವ ವ್ಯಾಪ್ತಿಯನ್ನು ವಿಸ್ತರಿಸಿದೆ. ಈ ಭೇಟಿಯು ಕಾಂಗ್ರೆಸ್ ನಾಯಕರು ಧಾರ್ಮಿಕ ಆಚರಣೆಗಳಿಂದ ದೂರ ಇರುತ್ತಾರೆ ಎನ್ನುವ ವಾದವನ್ನು ಹುಸಿಮಾಡಿದೆ. ಇದರಿಂದಾಗಿ ಪ್ರಸ್ತುತ ರಾಜಕೀಯ ವಿಶ್ಲೇಷಕರು ತಮ್ಮ ದೃಷ್ಟಿಕೋನದ ವ್ಯಾಪ್ತಿಯೇ ಬದಲಾಯಿಸಿಕೊಳ್ಳುವ ಕಾಲ ಸನ್ನಿಹಿತವಾದಂತಿದೆ.
ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯ ಕಪಿಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ, ತಾವು ಕುಂಭಮೇಳಕ್ಕೆ ಭೇಟಿ ನೀಡುವ ಸಂಗತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿದ್ದರು. ಅದರಂತೆಯೇ ಉತ್ತರ ಪ್ರದೇಶ ಸರ್ಕಾರ ಹಾಗೂ ಅಲ್ಲಿನ ಅಧಿಕಾರಿಗಳು ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತಮ್ಮನ್ನು ಆಹ್ವಾನಿಸಿದ್ದಾರೆ ಎನ್ನುವುದನ್ನು ಖಾತ್ರಿ ಪಡಿಸಿದ್ದರು. ಉತ್ತರ ಪ್ರದೇಶ ಸರಕಾರದ ಆಹ್ವಾನಕ್ಕೆ ಗೌರವ ನೀಡಿದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ದೇಶದಲ್ಲಿ ನಡೆಯುವ ಈ ‘ಮಹಾ’ ಕಾರ್ಯಕ್ರಮಕ್ಕೆ ತಾನೂ ಭಾಗವಾಗಲು ಬಯಸುತ್ತೇನೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದರು. ಹಿನ್ನೆಲೆಯಲ್ಲಿ ಅವರು ಮಹಾ ಕುಂಭಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ, ಉತ್ತರ ಪ್ರದೇಶದ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಅಧಿಕಾರಿಗಳು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಆಗಲೇ ಅವರಿಗೆ ತಾವೂ ಕರ್ನಾಟಕ ಸರಕಾರದ ಪರವಾಗಿ ಈ ಮಹಾ ಕುಂಭಮೇಳದ ಮಹಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಇದು ದೇಶದಲ್ಲಿ ನಡೆಯುತ್ತಿರುವ ಐತಿಹಾಸಿಕ ಘಟನೆ. ಇದಕ್ಕೆ ತಾನು ಸಾಕ್ಷಿಯಾಗುವ ಇಂಗಿತ ವ್ಯಕ್ತ ಪಡಿಸಿದ್ದರು. ಜೊತೆಗೆ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮ ಜೀವನ ಪಾವನ ಮಾಡುವುದರೊಂದಿಗೆ ಭಾರತದ ಸಮಸ್ತ ದೇಶ ವಾಸಿಗಳಿಗೆ ಎಲ್ಲಾ ರೀತಿಯಲ್ಲಿ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವ ಬಗ್ಗೆ ಸಂತೋಷದಿಂದ ಶಿವಕುಮಾರ್ ತಿಳಿಸಿದ್ದಾರೆ.
ಆಧ್ಯಾತ್ಮಿಕತೆ ಮತ್ತು ಭಾರತೀಯ ಪರಂಪರೆಯ ಮಹತ್ವವನ್ನು ಒತ್ತಿಹೇಳುವ ಈ ಕಾರ್ಯವು ಶಿವಕುಮಾರ ಅವರ ಶಾಹಿ ಸ್ನಾನ ಮಾಡಿದೆ. ಪ್ರಸ್ತುತ ಪ್ರಯಾಗ್‌ರಾಜ್ ಭೇಟಿಯು ಭಾರತೀಯರ ಧಾರ್ಮಿಕ ಸಾಮರಸ್ಯ ಹಾಗೂ ಐಕ್ಯತೆಯನ್ನು ಪ್ರದರ್ಶಿಸುತ್ತಿದೆ. ದೇಶದ ಜನತೆಯಲ್ಲಿ ಭಕ್ತಿ ಭಾವ ಹೆಚ್ಚಿಸಲು ಮತ್ತು ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಮಹತ್ವಪೂರ್ಣ ಹೆಜ್ಜೆಯಾಗಿದೆ. ಡಿ.ಕೆ. ಶಿವಕುಮಾರ್ ಅವರ ಈ ಭೇಟಿಯು ನವಯುಗದ ನಾಯಕರು ಹೇಗೆ ರಾಜಕೀಯ ಮತ್ತು ಧಾರ್ಮಿಕ ಸಾಮರಸ್ಯವನ್ನು ಹೊಂದಿಸಬಹುದೆಂಬುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಪ್ರಯತ್ನವು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಸಾರ್ವಜನಿಕ ಸಾಮರಸ್ಯವನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ ಎನ್ನುವ ಮಾತು ಪ್ರಾಜ್ಞರ ವಲಯದಲ್ಲಿ ಕೇಳಿ ಬರುತ್ತಿದೆ.
ಮಹಾಕುಂಭವು ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಹಬ್ಬ. ಈ ಮೇಳಕ್ಕೆ ಪ್ರಪಂಚದ ನಾನಾ ಭಾಗಗಳಿಂದ ಶ್ರದ್ಧಾಳು ಭಕ್ತರು ಬಂದಿದ್ದಾರೆ. ಇದು ದೇಶದ ಆಸ್ತಿಕತೆಯನ್ನು ಜಾಗತಿಕ ಮಟ್ಟದಲ್ಲಿ ತೋರಿಸಿದೆ. ಈ ಬಾರಿಯ ಮಹಾಕುಂಭಮೇಳವು ಸನಾತನ ಧರ್ಮದ ಘೋಷಣೆಯನ್ನು ಮನುಕುಲಕ್ಕೆ ಸಾರಿದೆ. ಇಂತಹ ಸಮಯದಲ್ಲಿ ಕ್ಷುಲ್ಲಕ ರಾಜಕೀಯದ ಬವಣೆಗೆ ಲೆಕ್ಕಿಸದೆ ಇಂತಹದೊಂದು ಮಹಾ ಪರ್ವಕ್ಕೆ ಸಾಕ್ಷಿಯಾಗುವ ಮೂಲಕ ಡಿ.ಕೆ.ಶಿವಕುಮಾರ ಅವರು ಸಮಸ್ತ ಜನರಲ್ಲಿ ಭಾರತೀಯ ಪರಂಪರೆಯ ಮಹತ್ವಕ್ಕೆ ಪಕ್ಷ ರಾಜಕೀಯ ಅಡ್ಡಿಆಗಲಾರದು ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.
ಈ ಭೇಟಿಯು ಕೇವಲ ಧಾರ್ಮಿಕ ಮಾತ್ರವಲ್ಲ, ರಾಜಕೀಯ ಚರ್ಚೆಗಳಿಗೂ ಹೊಸ ಆಯಾಮವನ್ನು ನೀಡಿದೆ. ವಾಸ್ತವದಲ್ಲಿ ಬಹುತೇಕ ಭಾರತದ ಹಿಂದುಗಳು, ಕಾಂಗ್ರೆಸ್ ಪಕ್ಷವು ಸನಾತನ ಧರ್ಮವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಿಥ್ಯ ನಿಲುವಿಗೆ ಬಂದಿದ್ದರು. ಆದರೆ ರಾಜಕೀಯ ನಾಯಕರ ಧಾರ್ಮಿಕ ಭಾವನೆಗಳು ಸಹ ಸಾರ್ವಜನಿಕ ವಲಯದಲ್ಲಿ ವಾಸ್ತವದ ಅರ್ಥ ಕಳೆದುಕೊಂಡು ರಾಜಕೀಯ ಸಮೀಕರಣಕ್ಕೆ ಕಾರಣವಾಗುವುದು ಸಾಮಾನ್ಯ. ಈ ಬಗ್ಗೆ ರಾಜಕೀಯ ವಿಶ್ಲೇಷಕರು ಎಂದು ಗುರುತಿಸಿಕೊಂಡವರು ಅವರವರ ಭಕ್ತಿ ಭಾವಕ್ಕೆ ಅರಿತಂತೆ ವ್ಯಾಖ್ಯಾನಿಸುವುದು ಕಂಡು ಬರುತ್ತಿದೆ. ವಾಸ್ತವದಲ್ಲಿ ಇಲ್ಲಿ ಡಿ.ಕೆ.ಶಿವಕುಮಾರ ಅವರ ಕುಂಭ ಭೇಟಿಯು ಕೇವಲ ಧಾರ್ಮಿಕ ಆಸ್ಥೆಯೇ ಹೊರತು ರಾಜಕೀಯ ಅಲ್ಲ ಎನ್ನುವುದು ಇನ್ನೊಮ್ಮೆ ಖಾತ್ರಿಯಾಗಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಇನ್ನೊಂದಿದೆ. ಛತ್ತೀಸ್‌ಗಢ ವಿಧಾನಸಭಾ ಸ್ಪೀಕರ್ ಡಾ. ರಮಣ್ ಸಿಂಗ್ ಅವರು ತಮ್ಮ ರಾಜ್ಯದ ಎಲ್ಲಾ ಶಾಸಕರಿಗೆ ಮಹಾಕುಂಭಕ್ಕೆ ತೆರಳುವುದಕ್ಕೆ ಆಹ್ವಾನಿಸಿ, ಎಲ್ಲರೂ ಜಂಟಿಯಾಗಿ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಪ್ರವಾಸ ಕೈಗೊಳ್ಳುವಂತೆ ವಿನಂತಿಸಿದ್ದರು. ಸ್ಪೀಕರ ಮನವಿಗೆ ಅಲ್ಲಿನ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಸಕಾರಾತ್ಮಕ ಸ್ಪಂದನೆ ನೀಡಿ, ʻʻ144 ವರ್ಷಗಳ ನಂತರ ಮಹಾಕುಂಭ ನಡೆಯುತ್ತಿದೆ. ಇದು ಅಪರೂಪದ ಮತ್ತು ಶುಭ ಸಂಧರ್ಭ. ನಾವೆಲ್ಲರೂ ಅದರಲ್ಲಿ ಭಾಗವಹಿಸಲು ಬಯಸುತ್ತೇವೆ” ಎಂದು ಹೇಳಿದ್ದರು. ಆದರೆ ಈ ಆಹ್ವಾನವನ್ನು ಅಲ್ಲಿನ ವಿರೋಧ ಪಕ್ಷದ ನಾಯಕ ಚರಣದಾಸ್ ಮಹಾಂತ್ ತಿರಸ್ಕರಿಸುವ ಮೂಲಕ ರಾಜಕೀಯ ಮೇಲಾಟವನ್ನು ನಡೆಸಿದ್ದರು. ಆಗ ಅಲ್ಲಿನ ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಪಂಕಜ್ ಝಾ ಅವರು, ʻ ಸ್ಪೀಕರ್ ಅವರ ಆಹ್ವಾನ ಶ್ಲಾಘನೀಯ. ವಿರೋಧ ಪಕ್ಷದ ನಾಯಕ ಮಹಾಂತ್ ಅವರು ಹಠಮಾರಿ ಯಾಗಬಾರದು. ಇದು ರಾಜಕೀಯ ವಿಷಯವಲ್ಲ. ಆದ್ದರಿಂದ ಕಾಂಗ್ರೆಸ್ ಶಾಸಕರು ತಮ್ಮ ಆಂತರಿಕ ಆತ್ಮಸಾಕ್ಷಿಯನ್ನು ಆಲಿಸಿ ಅದಕ್ಕೆ ಅನುಗುಣವಾಗಿ ನಡೆಯಬೇಕುʼ ಎಂದಿದ್ದರು. ಅದನ್ನುಇಲ್ಲಿ ಸ್ಮರಿಸಿಕೊಳ್ಳಬೇಕು.
ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಸತೀಶ್ ಮಹಾನ್ ಅವರ ಆಹ್ವಾನದ ಮೇರೆಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಅಲಹಾಬಾದ್‌ನ ನಜರತ್ ಮಖ್ದುಮ್ ಸಾದತ್ ಚೌಧೋನ್ ಪಿರೋ ದರ್ಗಾ ಶರೀಫ್‌ಗೆ ಭೇಟಿ ನೀಡಿ ನಂತರ ವಾರಾಣಾಶಿಯಲ್ಲಿ ನಡೆಯುವ ಗಂಗಾರತಿಯನ್ನು ವೀಕ್ಷಿಸಿ ಬಂದಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟ. ಕೋಟ್ಯಾಂತರ ಭಕ್ತರು ಸೇರಿರುವ ಪುಣ್ಯ ನೆಲದಲ್ಲಿ ಯು.ಟಿ. ಖಾದರ್ ಅವರು ಕರ್ನಾಟಕದ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಜೊತೆಗೆ ಹಿರಿಯ ನಾಗಾ ಸಾಧುಗಳಿಂದ ಆಶೀರ್ವಾದ ಪಡೆದಿದ್ದು ನಮಗೆಲ್ಲಾ ತಿಳಿದಿರುವ ಸಂಗತಿ.
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕರು ಧಾರ್ಮಿಕ ಆಚರಣೆಗಳಿಂದ ದೂರ ಇರುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಭಾರತೀಯ ಸಂಸ್ಕೃತಿ, ಹಿತಾಸಕ್ತಿ ಮತ್ತು ಧಾರ್ಮಿಕ ಭಾವನೆಗಳ ಸಂಕೇತವನ್ನು ನಿತ್ಯವು ಗೌರವಿಸುತ್ತಾರೆ ಎನ್ನುವುದನ್ನು ಇನ್ನೊಮ್ಮೆ ಬಹಿರಂಗ ಪಡಿಸುವ ಮೂಲಕ ಸನಾತನ ಧರ್ಮ, ಸಂಸ್ಕೃತಿ ಮತ್ತು ಸಮುದಾಯಗಳ ಬಗೆಗಿನ ಗೌರವ ತೋರಿದ್ದಾರೆ.
ಹಿಂದೂ ಸಂಸ್ಕೃತಿಯ ಮಹತ್ವವನ್ನು ಒಪ್ಪಿಕೊಂಡ ಡಿ.ಕೆ. ಶಿವಕುಮಾರ ಅವರು ತಮ್ಮಜೊತೆ ಎಲ್ಲ ಸಮುದಾಯಗಳ ಪರಿಪೋಷಣೆ ತಮ್ಮ ರಾಜಕೀಯದ ಧೋರಣೆ ಎನ್ನುವುದರ ಜೊತೆ, ಸಂಸ್ಕೃತಿಯ ಮತ್ತು ಧಾರ್ಮಿಕ ಪರಂಪರೆಯ ಸಮನ್ವಯವನ್ನು ದೃಢಪಡಿಸಿದ್ದಾರೆ. ಈ ಭೇಟಿಯು ಭಾರತೀಯ ಧಾರ್ಮಿಕ ಸಾಮರಸ್ಯದ ಹಾಗೂ ಐಕ್ಯತೆಯ ಘೋಷಣೆಗೆ ಸಾಕ್ಷಿಯಾಗಿದೆ. ನಾಡಿನ ಜನತೆಯಲ್ಲಿ ಭಕ್ತಿ ಭಾವವನ್ನು ಹೆಚ್ಚಿಸಲು ಮತ್ತು ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಯನ್ನು ಉಳಿಸಿ ಬೆಳೆಸಲು ಮಹತ್ವ ಹೆಜ್ಜೆಯನ್ನು ಡಿ.ಕೆ.ಶಿವಕುಮಾರ ಇಟ್ಟಿದ್ದಾರೆ. ಈ ಮೂಲಕ ನವಯುಗದ ನಾಯಕರು ಹೇಗೆ ರಾಜಕೀಯ ಮತ್ತು ಧಾರ್ಮಿಕ ಸಾಮರಸ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.