ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ವಿರುದ್ಧ ಮದುವೆಯ ಭರವಸೆಯಿತ್ತು ರೇಪ್ ಮಾಡಿ ವಂಚಿಸಿರುವುದಾಗಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇನ್ಸ್ಪೆಕ್ಟರ್ ಸುನಿಲ್ ಮತ್ತು ಅವರೊಂದಿಗೆ ಗುರುತಿಸಿಕೊಂಡ ಮತ್ತೊಬ್ಬ ಎಎಸ್ಐಯನ್ನು ತಕ್ಷಣವೇ ಅಮಾನತುಗೊಳಿಸ ಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ಇನ್ಸ್ಪೆಕ್ಟರ್ ಸುನಿಲ್, ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ, ತನ್ನ ಹೆಸರಿನಲ್ಲಿ ಮನೆ ಕೊಡಿಸುವುದಾಗಿ ಮತ್ತು ಬ್ಯೂಟಿ ಪಾರ್ಲರ್ ತೆರೆಸಿಕೊಡುವುದಾಗಿ ಆಮಿಷವೊಡ್ಡಿದ್ದರು. ಗೋವಿಂದಪುರದ ಖಾಸಗಿ ಹೋಟೆಲ್, 8ನೇ ಮೈಲಿಯಲ್ಲಿರುವ ತಮ್ಮ ನಿವಾಸ ಮತ್ತು ಮತ್ತೊಂದು ಹೋಟೆಲ್ಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ (36 ವರ್ಷದ ಅಲ್ಪಸಂಖ್ಯಾತ ಸಮುದಾಯದ ಮಹಿಳೆ) ದೂರಿನಲ್ಲಿ ವಿವರಿಸಿದ್ದಾರೆ.
ಇನ್ಸ್ಪೆಕ್ಟರ್ ಸುನಿಲ್ ಸಂತ್ರಸ್ತೆಯ ಖಾಸಗಿ ಪೋಟೋಗಳು ಮತ್ತು ವೀಡಿಯೊಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಯಾರಿಗಾದರೂ ವಿಚಾರ ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.
ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪದಡಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 69 (ವಂಚನೆ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಕರ್ತವ್ಯಲೋಪ ಮತ್ತು ದುರ್ವ್ಯವಹಾರದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಸುನಿಲ್ ಮತ್ತು ಮತ್ತೊಬ್ಬ ಎಎಸ್ಐ ವಿರುದ್ಧವೂ ಪ್ರಕರಣ ದಾಖಲಿಸಿ, ಇಬ್ಬರನ್ನೂ ಅಮಾನತುಗೊಳಿ ಸಲಾಗಿದೆ. ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.


