ವಿಚ್ಚೇದಿತ ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿದ ಯುವಕನೊಬ್ಬ ಆಕೆಗೆ ಮಗು ಕರುಣಿಸಿದ್ದೂ ಅಲ್ಲದೇ 36 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬನಶಂಕರಿಯ ನಿವಾಸಿ ಮೋಹನ್ ರಾಜ್ ಎಂಬಾತನ ವಂಚನೆ ವಿರುದ್ಧದ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯವಿದ್ದು, 2022ರಲ್ಲಿ ಇಬ್ಬರ ನಡುವೆ ಮದುವೆ ನಡೆದಿತ್ತು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಇಂದಿಗೂ ಪತ್ತೆಯಾಗಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಮದುವೆಯಾದ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದಿದ್ದಾನೆ. ಚಿನ್ನಾಭರಣ ಅಡವಿಟ್ಟು, ಸಾಲ ಪಡೆದು ಒಟ್ಟು 36 ಲಕ್ಷ ರೂಪಾಯಿ ನೀಡಿದ್ದೇನೆ. ಆದರೆ ಅದನ್ನು ಕೂಡ ವಾಪಸ್ ಮಾಡಿಲ್ಲ. ಕೇಳಿದರೆ ‘ನೀನು ಯಾರು ಅಂತಲೇ ಗೊತ್ತಿಲ್ಲ’ ಎಂದು ಹೇಳುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ನ್ಯಾಯ ಕೇಳಲು ಮೋಹನ್ ರಾಜ್ ಮನೆ ಬಳಿ ಹೋದಾಗ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಈವರೆಗೆ ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನ್ಯಾಯ ಸಿಗುತ್ತಿಲ್ಲ. ಮತ್ತೊಮ್ಮೆ ದೂರು ನೀಡಿದರೆ ‘ನಿನ್ನನ್ನೇ ಒಳಗೆ ಹಾಕ್ತೀವಿ’ ಎಂದು ಪೊಲೀಸರು ಹೆದರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸರೊಂದಿಗೆ ಆರೋಪಿಗೆ ನಂಟಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೊನೆಗೆ ಇದೀಗ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯು 2021ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಮೊದಲ ಮದುವೆಯ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ ಮೋಹನ್ ರಾಜ್ ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಮೊದಲ ಪತಿಗೆ ಅನಾರೋಗ್ಯ ಸಮಸ್ಯೆ ಇದ್ದುದರಿಂದ ವಿಚ್ಛೇದನ ಪಡೆದಿದ್ದೆ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.
ಯುವತಿಯರೊಂದಿಗೆ ಅಕ್ರಮ ಸಂಬಂಧ, ಅಶ್ಲೀಲ ಮೆಸೇಜ್: ಮಹಿಳೆ ಆರೋಪ
ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ, ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ. ಮೊಬೈಲ್‌ನಲ್ಲಿ ಫೋಟೋಗಳನ್ನೂ ನೋಡಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮದುವೆಗೆ ಮುಂಚೆಯೂ ನಂತರವೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ತನ್ನ ಹೆಣ್ಣು ಮಗು ಹಾಗೂ ಮೊದಲ ಪತಿಯ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾರೆ. ಸದ್ಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


