ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಬೆಳಗಾವಿಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಮಠವನ್ನು ಸ್ಥಳೀಯಾಡಳಿತ ಧ್ವಂಸಗೊಳಿಸಿದೆ.
ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪದಲ್ಲಿ ಮಠದ ಲೋಕೇಶ್ವರ ಮಹಾರಾಜ ಸ್ವಾಮಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಈ ಮಠವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಠವನ್ನು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ನೊಂದಿಗೆ ತಹಸೀಲ್ದಾರ್ ಸಮ್ಮುಖ ಕಾರ್ಯಾಚರಣೆ ನಡೆದಿದೆ.
ಆರೋಪಿ ಲೋಕೇಶ್ವರ ಮಹಾರಾಜ ಸ್ವಾಮಿ ಮೇಖಳಿ ಗ್ರಾಮದಲ್ಲಿ 8-10 ವರ್ಷದ ಹಿಂದೆ ಮಠ ನಿರ್ಮಾಣ ಮಾಡಿ ರಾಮ ಮಂದಿರ ಎಂದು ಹೆಸರಿಟ್ಟಿದ್ದರು. ಆರೋಪಿಯ ಬಂಧನದ ಬೆನ್ನಲ್ಲೇ, ಇಂತಹ ಸ್ವಾಮಿ ನಮ್ಮ ಊರಿಗೆ ಬರುವುದು ಬೇಡ. ಯಾವುದೇ ಕಾರಣಕ್ಕೂ ಆತನನ್ನು ನಮ್ಮೂರು ಸೇರಿಸಲು ಬಿಡಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಲಬುರಗಿಯಿಂದ ಇಲ್ಲಿಗೆ ಬಂದು ಸರ್ಕಾರಿ ಜಾಗ ಸರ್ವೇ ನಂಬರ್ 225ರಲ್ಲಿ ಎಂಟು ಎಕರೆ ಜಾಗದಲ್ಲಿ ರಾಮ ಮಂದಿರ ಹಾಗೂ ಮಠ ಕಟ್ಟಿ ಉಳಿದುಕೊಂಡಿದ್ದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಬಗ್ಗೆ ಕೆಲವು ವರ್ಷದ ಹಿಂದೆ ತಹಸೀಲ್ದಾರ್ ಗಮನಕ್ಕೆ ಬಂದಿತ್ತು. ಮಠ ತೆರವು ಮಾಡುವಂತೆ ಹಲವು ಬಾರಿ ನೋಟಿಸ್ ಕೂಡ ನೀಡಿದ್ದರು. ಆರೋಪಿ ಸ್ವಾಮೀಜಿ ರೇಪ್ ಕೇಸ್ನಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆಯೇ ರಾಯಭಾಗ ತಹಸೀಲ್ದಾರ್ ಸುರೇಶ್ ಮುಂಜೆ ಸಮ್ಮುಖದಲ್ಲಿ ಮಠ ಕೆಡವಲಾಯಿತು. ಸರ್ಕಾರಿ ಜಾಗವನ್ನು ಹೆಸ್ಕಾಂ ಇಲಾಖೆಗೆ ಬಿಟ್ಟು ಕೊಡುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.