“ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷವನ್ನು 2028 ಹಾಗೂ 2029 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಅವರ ಜತೆ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ ಒಟ್ಟಾಗಿ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. “ನಾನು ಪಕ್ಷದ ಅಧ್ಯಕ್ಷ, ಸತೀಶ್ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರು. ಜೊತೆಗೆ ನಾವಿಬ್ಬರು ಆತ್ಮೀಯ ಸ್ನೇಹಿತರು. ಇಬ್ಬರ ಬಾಂಧವ್ಯ ಚೆನ್ನಾಗಿದೆ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಮತ್ತು ಸತೀಶ್ ಇಬ್ಬರೂ ಪ್ರಸ್ತುತ ಒಂದೇ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಸತೀಶ್ ಜಾರಕಿಹೊಳಿ ಅವರು ಪಕ್ಷದ ದೊಡ್ಡ ಆಸ್ತಿ. ನಾವು ನಮ್ಮ ಕೆಲಸ ಮುಂದುವರಿ ಸಿಕೊಂಡು ಹೋಗುತ್ತೇವೆ” ಎಂದರು.
“ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಮಿಕ್ಕ ಸಮಯದಲ್ಲಿ ಏನೇನು ಕೆಲಸಗಳನ್ನು ಮಾಡಬೇಕು ಎಂದು ಚರ್ಚೆ ನಡೆಸಲಾಗಿದೆ. ಇದು ಬಿಟ್ಟರೆ ಮಾತುಕತೆಯಲ್ಲಿ ಬೇರೆ ವಿಶೇಷತೆ ಏನಿಲ್ಲ” ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂ ಬಣವಿದೆ ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, “ನನ್ನದು ಯಾವುದೇ ಬಣವಿಲ್ಲ. ಒಂದು ಬಣವಿದೆ, ಅದು ‘ಕಾಂಗ್ರೆಸ್ ಬಣ’. ನನ್ನ ಸಂಖ್ಯೆ 140. ಸಾಮೂಹಿಕ ನಾಯಕತ್ವದಲ್ಲಿ ಈ ಪಕ್ಷವನ್ನು ಕಟ್ಟಲಾಗಿದೆ. ಪಕ್ಷಕ್ಕೆ ನಾನೊಬ್ಬನೆ ದುಡಿದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಶಾಸಕರ ಶ್ರಮದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇವೆ. ಇದನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ನಾನು ಭೇಟಿ ಮಾಡಿ ಚರ್ಚಿಸಿದ್ದೇವೆ” ಎಂದರು.
ಎರಡೂವರೆ ವರ್ಷ ನಿಮಗೆ ಮೀಸಲಿಟ್ಟಿರುವ ಸಮಯವೇ ಎಂದು ಕೇಳಿದಾಗ, “ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಅದನ್ನೆಲ್ಲಾ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ನಮ್ಮನ್ನು ಗುರುತಿಸಿದೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಪಕ್ಷದ ಎಲ್ಲಾ ಸಚಿವರು, ಶಾಸಕರು, ಪಂಚಾಯತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಎಲ್ಲ ಚುನಾವಣೆಯಲ್ಲೂ ಒಟ್ಟಿಗೆ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸೂಕ್ತ ಸಮಯದಲ್ಲಿ ಪಕ್ಷ ತೀರ್ಮಾನ ಮಾಡಲಿದೆ
ನಿಮಗೆ ನಾಯಕತ್ವ ನೀಡಬೇಕು ಎಂದು ದೆಹಲಿಗೆ ಒಂದಷ್ಟು ಜನ ಶಾಸಕರು ತೆರಳಿ ಹೈಕಮಾಂಡ್ ಭೇಟಿಗೆ ಪ್ರಯತ್ನಿಸಿದ್ದಾರೆ ಹಾಗೂ ಮರಳಿ ಬಂದಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಯವರು ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದಿದ್ದಾರೆ. ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇರುತ್ತದೆ. ಆದ ಕಾರಣಕ್ಕೆ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ. ಸಚಿವ ಸ್ಥಾನದ ಆಕಾಂಕ್ಷೆ ಇರುವುದರ ಬಗ್ಗೆ ನಾನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಪರವಾಗಿ ಯಾರೂ ಮಾತನಾಡುವುದು ಬೇಡ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲಿದೆ. ಅಧಿಕಾರದ ಬಗ್ಗೆ ಏನೇ ಚರ್ಚೆಯಗಿದ್ದರೂ ಅದು ನಾಲ್ಕು ಗೋಡೆಗಳ ಮಧ್ಯೆ ಆಗಿದೆ. ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ” ಎಂದರು.
“ಮುಖ್ಯಮಂತ್ರಿ ಹುದ್ದೆ, ಅಧಿಕಾರ ಹಸ್ತಾಂತರ ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆ , ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುತ್ತಾರೆ. ಸೂಕ್ತ ತೀರ್ಮಾನ ಮಾಡುತ್ತಾರೆ” ಎಂದು ಹೇಳಿದರು.
2028 ರಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ನಾಯಕತ್ವದಲ್ಲಿ ಅಧಿಕಾರಕ್ಕೆ ಬರುವುದೇ ಎಂದು ಕೇಳಿದಾಗ, “ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವವನು. ಕಳೆದ ಆರು ವರ್ಷಗಳಿಂದ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮಲ್ಲಿ ವ್ಯಕ್ತಿ ಪೂಜೆಯಿಲ್ಲ, ಪಕ್ಷ ಪೂಜೆ ಮಾತ್ರ” ಎಂದರು.
ಸದಾನಂದಗೌಡ ಅವರು ಸೇರಿದಂತೆ ಇತರೇ ಪಕ್ಷಗಳ ನಾಯಕರು ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಹಾಗೂ ಜನತಾದಳದ ನಾಯಕರು ನಮ್ಮ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯಿಲ್ಲ. ಅವರು ತಮ್ಮ ಪಕ್ಷದಲ್ಲಿರುವ ಸಮಸ್ಯೆಗಳ ನ್ನು ನೋಡಿಕೊಳ್ಳಲಿ. ಪಕ್ಷ ನನ್ನ ಹಿತ ಕಾಯಲಿದೆ. ನನ್ನ ಕಷ್ಟ ಕಾಲದಲ್ಲಿ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ವಿರೋಧ ಪಕ್ಷದವರು ನನ್ನ ಬಗ್ಗೆ ಕಾಳಜಿವಹಿಸುವುದು ಬೇಡ. ನಾನು ಅಪ್ಪಟ ಕಾಂಗ್ರೆಸ್ಸಿಗ” ಎಂದು ಹೇಳಿದರು.
ಎರಡುವರೆ ವರ್ಷ ನೀವು ಸಿಎಂ ಆಗಲಿದ್ದೀರಿ ಎನ್ನುವ ಕಾರ್ಯಕರ್ತರ ಪ್ರಾರ್ಥನೆಗಳ ಬಗ್ಗೆ ಕೇಳಿದಾಗ, “ಅವರೆಲ್ಲಾ ಡಿಕೆ ಶಿವಕುಮಾರ್ ಬೆಂಬಲಿಗರಲ್ಲ, ಕಾಂಗ್ರೆಸ್ ಪಕ್ಷದ ಬೆಂಬಲಿಗರು” ಎಂದರು. ದೆಹಲಿಗೆ ತೆರಳುತ್ತಿರುವಿರಾ ಎಂದು ಕೇಳಿದಾಗ, “ಅಲ್ಲಿಗೆ ಹೋದಾಗ ಕಾಣಿಸಿಕೊಳ್ಳುವೆ” ಎಂದು ಉತ್ತರಿಸಿದರು.
ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ 29 ರಂದು ದೆಹಲಿಯಲ್ಲಿ ಸಭೆಯಿದೆ ಎನ್ನುವ ಬಗ್ಗೆ ಕೇಳಿದಾಗ, “28 ಸಂವಿಧಾನ ದಿನ, ಅಂಗನವಾಡಿ ಯೋಜನೆಗೆ 50 ವರ್ಷ ತುಂಬಿದ ಸಮಾರಂಭಗಳಿವೆ. 29ನೇ ತಾರೀಕು ಇನ್ನೂ ದೂರವಿದೆ, ನೋಡೋಣ” ಎಂದ ಡಿಸಿಎಂ, ಹೈಕಮಾಂಡ್ ಗೊಂದಲಗಳಿಗೆ ಪೂರ್ಣವಿರಾಮ ಹಾಕುವುದೇ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.
ಒಕ್ಕಲಿಗನಾಗಿ ಹುಟ್ಟಿದ್ದೇನೆ
ನೀವು ಒಕ್ಕಲಿಗರ ನಾಯಕರಲ್ಲ ಎಂದು ಆರ್ಅ ಶೋಕ್ ಹೇಳಿರುವ ಬಗ್ಗೆ ಕೇಳಿದಾಗ, “ನಾನು ಒಕ್ಕಲಿಗರ ನಾಯಕ ಎಂದು ಯಾವಾಗ ಹೇಳಿದ್ದೇನೆ? ನಾನು ಕಾಂಗ್ರೆಸ್ ಪಕ್ಷದ ನಾಯಕ. ಒಕ್ಕಲಿಗನಾಗಿ ಹುಟ್ಟಿದ್ದೇನೆ ಅಷ್ಟೇ. ಇದರಲ್ಲಿ ಅನುಮಾನವಿಲ್ಲ. ನಾವು ಬಿಟ್ಟರೂ ಧರ್ಮ ಮತ್ತು ಜಾತಿ ನಮ್ಮನ್ನು ಬಿಡುವುದಿಲ್ಲ” ಎಂದರು.
“ಅಶೋಕ್ ಅವರೇ ಒಕ್ಕಲಿಗರ ನಾಯಕ ಪದ ತೆಗೆದುಕೊಂಡು ಬ್ಯಾಡ್ಜ್ ಹಾಕಿಕೊಂಡಿದ್ದಾರೆ. ನಾನೇ ಅವರಿಗೆ ಒಕ್ಕಲಿಗ ನಾಯಕ ಬ್ಯಾಡ್ಜ್ ಕಳಿಸಿಕೊಡುತ್ತೇನೆ. ಅದನ್ನು ಅಶೋಕಣ್ಣ ಹಾಕಿಕೊಳ್ಳಲಿ. ಚಕ್ರವರ್ತಿ, ಸಾಮ್ರಾಟ್ ಅಶೋಕ್ ಎನ್ನುವ ಒಳ್ಳೆ ಪದವಿ ಅಶೋಕಣ್ಣನಿಗೆ ಇದೆ” ಎಂದು ವ್ಯಂಗ್ಯವಾಡಿದರು.
ನೀವು ಮತ್ತು ಸಿದ್ದರಾಮಯ್ಯ ಅವರು ಜೋಡೆತ್ತುಗಳಂತೆ ಪಕ್ಷವನ್ನು ಅಧಿಕಾರಕ್ಕೆ ತಂದವರು. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆಯೇ ಎಂದು ಕೇಳಿದಾಗ, “ಈಗ ಇಬ್ಬರೂ ಜೊತೆಯಲ್ಲೇ ಸರ್ಕಾರ ನಡೆಸುತ್ತಿದ್ದೇವಲ್ಲ. ಎಲ್ಲರೂ ಒಟ್ಟಿಗೆ ಸರ್ಕಾರ ತೆಗೆದುಕೊಂಡು ಹೋಗುತ್ತಿದ್ದೇವೆ. ಜನರಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುತ್ತಿದ್ದೇವಲ್ಲ” ಎಂದರು.
“ನನ್ನ ಮೇಲೆ ಶೋಷಣೆ ಮಾಡುತ್ತಿರುವುದಕ್ಕೆ ಮಾಧ್ಯಮಗಳ ಮೇಲೆ ಪ್ರಕರಣ ದಾಖಲು ಮಾಡಬೇಕಾಗುತ್ತದೆ. ನನಗೆ ದಿಗ್ಬಂದನ ವಿಧಿಸಿದ್ದೀರ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಬೇಡ ಹಾಗೂ ಏಕ ನಾಗರಿಕ ಸಂಹಿತೆ ಪಾಲಿಸಬೇಕು ಎನ್ನುವ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಧೀಶರಾದ ಬಿ.ಆರ್. ಗವಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ತಮ್ಮ ಅನುಭವನದ ಆಧಾರದ ಮೇಲೆ ಮಾತನಾಡಿದ್ದಾರೆ. ಆದರೆ ಸಮಾಜದಲ್ಲಿ ಇನ್ನೂ ಅನೇಕ ಸಮುದಾಯಗಳಿಗೆ, ಗ್ರಾಮೀಣ ಭಾಗದಲ್ಲಿ ಇರುವವರಿಗೆ ಅನೇಕ ಸೌಲಭ್ಯಗಳು ತಲುಪಿಲ್ಲ. ಇವರನ್ನೆಲ್ಲಾ ಮೇಲೆತ್ತುವುದು ನಮ್ಮೆಲ್ಲರ ಕೆಲಸವಾಗಬೇಕು. ನಮ್ಮ ಸರ್ಕಾರ ಕರ್ನಾಟಕದಲ್ಲಿ ತಿದ್ದುಪಡಿ ತಂದು ಶೋಷಿತ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಗೆ ಹಣ ನೀಡುತ್ತಿದೆ. ಇಂತಹ ಒಂದೇ ಒಂದು ಕೆಲಸವನ್ನು ಎನ್ ಡಿಎ ಸರ್ಕಾರ ತರುವ ಧೈರ್ಯ ಮಾಡುತ್ತಿಲ್ಲ” ಎಂದರು.


