ಪಕ್ಷದ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣದ 5 ಮುಖಂಡರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಯಡಿಯೂರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಇತ್ತೀಚೆಗೆ ಯತ್ನಾಳ್ ಗೆ ನೋಟೀಸ್ ಜಾರಿ ಮಾಡಿದ್ದ ಕೇಂದ್ರೀಯ ಶಿಸ್ತು ಸಮಿತಿ ಇದೀಗ ಯಡಿಯೂರಪ್ಪ ಬಣದ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ.
ಶಾಸಕರಾದ ರೇಣುಕಾ ಚಾರ್ಯ, ಎಸ್.ಟಿ.ಸೋಮಶೇಕರ್, ಶಿವರಾಂ ಹೆಬ್ಬಾರ್, ಮಾಜಿ ಶಾಸಕರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಬಿ.ಪಿ.ಹರೀಶ್ ಗೆ ನೋಟೀಸ್ ಜಾರಿ ಮಾಡಲಾಗಿದೆ.
ಶಾಕಸರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, 72 ಗಂಟೆಯೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಆರೋಪಗಳನ್ನು ಒಪ್ಪಿಕೊಂಡಿದ್ದೇವೆ ಎಂದು ಭಾವಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.
ಯತ್ನಾಳ್ ಬಣದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದೂ ಅಲ್ಲದೇ ಲಿಂಗಾಯತ ಸಮುದಾಯದ ಬೃಹತ್ ಸಮಾವೇಶಕ್ಕೆ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ರೇಣುಕಾ ಚಾರ್ಯ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಬಿ.ಪಿ.ಹರೀಶ್ ಅವರಿಗೆ ನೋಟೀಸ್ ನೀಡಲಾಗಿದ್ದರೆ, ಕಾಂಗ್ರೆಸ್ ಸರ್ಕಾರದ ಪರ ಹೊಗಳಿಕೆ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಕ್ಕಾಗಿ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.