ನಿರ್ದೇಶಕ ಅನೀಶ್ ಅವರನ್ನು ಅಪಹರಿಸಿ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಪೊಲೀಸ್ ಬೆಲೆಗೆ ಬಿದ್ದಿದೆ. ಭೀಮಾ ಸಿನಿಮಾ ನಟಿ ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.
ನಿರ್ದೇಶಕ ಅನೀಶ್ ಇತ್ತೀಚೆಗೆ ʻಜೀವನದ ಭಾಷೆʼ ಎನ್ನುವ ಹೊಸ ಸಿನಿಮಾ ಮಾಡಿ, ಕಾರಣಾಂತರಗಳಿಂದ ಸಿನಿಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದರು. ಮುಂಬೈಗೆ ಶಿಫ್ಟ್ ಆಗಿದ್ದ ಅವರು ನಟಿ ಐಶ್ವರ್ಯಾಗೆ ತನ್ನ ಕಾರು ಮಾರಾಟದ ಬಗ್ಗೆ ವಿಚಾರ ತಿಳಿಸಿದ್ದರು. ನಟಿಯ ಮೂಲಕ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು, ಕಾರು ಖರೀದಿ ಮಾಡುವುದಾಗಿ ಹೇಳಿದ್ದರು. ನಟಿಯ ಮೂಲಕ ಅನೀಶ್ ಅವರನ್ನು ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿನ ಪ್ರದೇಶವೊಂದಕ್ಕೆ ಕರೆಸಿಕೊಂಡು ಕಿಡ್ನ್ಯಾಪ್ ಮಾಡಿದ್ದರು.
ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ ಬಳಿಕ ಬ್ಯಾರಹಳ್ಳಿ ಮನೆಯೊಂದರಲ್ಲಿ ಇರಿಸಿ ಕ್ರಿಕೆಟ್ ಸ್ಟಂಪ್, ಹಾಕಿ ಸ್ಟಿಕ್ನಿಂದ ಹಲ್ಲೆ ನಡೆಸಿದ್ದರು. ಬಳಿಕ ಚಿನ್ನಾಭರಣ ದೋಚಿಕೊಂಡು, ತುಮಕೂರಿನ ಮಧುಗಿರಿ ಬಳಿ ಬಿಟ್ಟಿದ್ದರು. ಈ ಸಂಬಂಧ ಅನೀಶ್ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಠಾಣೆಯ ಪೊಲೀಸರು, 11 ಜನರನ್ನ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತ ಅಪಹರಣದ ಸಂಚು ರೂಪಿಸಿದ್ದ. ಐದು ಲಕ್ಷ ಹಣದ ವಿಚಾರಕ್ಕೆ ಆಶೀರ್ವಾದ್ ಮತ್ತು ಅನೀಶ್ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಕಿಡ್ನ್ಯಾಪ್ ಮಾಡಿದ್ದಾರೆ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.


