ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ಉದ್ಯಮಿಗೆ 15 ಕೋಟಿ ರೂ. ವಂಚಿಸಿದ್ದ ಪ್ರಕರಣ ಬಹಿರಂಗಗೊಂಡಿದ್ದು, ಇದೀಗ ಬೆಂಗಳೂರಿನ ನಿವೃತ್ತ ಸಂಶೋಧಕರೊಬ್ಬರಿಗೆ ಐದು ಕೋಟಿ ರೂ. ವಂಚಿಸಿದ್ದಾರೆ.
ಮಾನವ ಕಳ್ಳಸಾಗಣೆ ಪ್ರಕರಣದ ಬೆದರಿಕೆ ಹಾಗೂ ನಕಲಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಈ ವಂಚನೆ ನಡೆದಿದ್ದು, ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 94 ವರ್ಷದ ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಬೆದರಿಸಿದ್ದಾನೆ. ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ‘ಸಂದೀಪ್ ರಾವ್’ ಹೆಸರಿನಲ್ಲಿ ಕರೆ ಮಾಡಿ, ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಪ್ ಮೂಲಕ ಪಡೆದಿದ್ದಾನೆ. ನಕಲಿ ಎಫ್‌ಐಆರ್ ಕಳುಹಿಸಿ ಸಿಬಿಐ ಅಧಿಕಾರಿಗಳಂತೆ ವೇಷ ಹಾಕಿಕೊಂಡು ವೀಡಿಯೊ ಕಾಲ್ ಮೂಲಕ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ.
ಕೇಸ್ ಕೈ ಬಿಡಲು ಹಣ ನೀಡಬೇಕು ಎಂದು ಒತ್ತಾಯಿಸಿದ ಆರೋಪಿಗಳು, ಜನವರಿ 17ರಿಂದ ಫೆಬ್ರವರಿ 23ರವರೆಗೆ ಹಂತ ಹಂತವಾಗಿ ಒಟ್ಟು 4.91 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡ ವೃದ್ಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


