ಆನ್‌ಲೈನ್ ವಂಚನೆಯ ಭಾಗವಾಗಿ ಮಂಡ್ಯದ ಬ್ಯಾಂಕ್ ಅಧಿಕಾರಿಯನ್ನು ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ 56 ಲಕ್ಷಕ್ಕೂ ಹೆಚ್ಚಿನ ಹಣವನ್ನು ವಂಚಕರು ದೋಚಿರುವುದು ಬಹಿರಂಗಗೊಂಡಿದೆ.
ಮಂಡ್ಯದಲ್ಲಿ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ 56 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡವರು. ಬ್ಯಾಂಕ್ ಮ್ಯಾನೇಜರ್‌ಗೆ ವಾಟ್ಸಾಪ್ ಮೂಲಕ ಸಿಬಿಐ ಅಧಿಕಾರಿ ಎಂದು ಕರೆ ಮಾಡಿ ನಿಮ್ಮ ಅಕೌಂಟ್‌ಗೆ ಮನಿ ಲಾಂಡ್ರಿಂಗ್ ಹಾಗೂ ಹವಾಲ ದಂಧೆ ಮೂಲಕ ಲಕ್ಷಾಂತರ ರೂಪಾಯಿ ಬಂದಿದೆ ಎಂದು ಬೆದರಿಸಿದ್ದಾನೆ. ನಕಲಿ ಅರೆಸ್ಟ್ ವಾರಂಟ್ ಕಳುಹಿಸಿ ಅಧಿಕಾರಿಯ ಅಕೌಂಟ್‌ನಲ್ಲಿದ್ದ 56 ಲಕ್ಷಕ್ಕೂ ಅಧಿಕ ಹಣ ಎಗರಿಸಿದ್ದಾನೆ.
ಬ್ಯಾಂಕ್ ಅಧಿಕಾರಿ ಮಂಡ್ಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಹಣ ಸಂದಾಯವಾದ ಬ್ಯಾಂಕ್ ಖಾತೆಗಳು ನಕಲಿ ಎಂದು ಪತ್ತೆ ಹಚ್ಚಿದ್ದಾರೆ. ಈ ಡಿಜಿಟಲ್ ಅರೆಸ್ಟ್ ಮಾಡಿದ ವಂಚನೆಯ ಜಾಲ ರಾಜಸ್ಥಾನದಿಂದ ಕಾರ್ಯಾಚರಿಸುತ್ತಿರುವುದು ತಿಳಿದುಬಂದಿದೆ. ರಾಜಸ್ಥಾನಕ್ಕೆ ತೆರಳಿ ವಿಚಾರಣೆ ಮಾಡಿದ ಈ ವಂಚನೆಯ ದಾಳ ದೆಹಲಿಯಲ್ಲಿ ಇದೆ ಎಂದು ಗೊತ್ತಾಗಿದೆ.
ರಾಜಸ್ಥಾನದಿಂದ ತನಿಖಾ ತಂಡ ದೆಹಲಿಗೆ ಹೋಗಿ ಗೋಪಾಲ್ ಬಿಷ್ಣೋಯಿ ಎಂಬಾತನನ್ನು ಬಂಧಿಸಿ ಬಳಿಕ ರಾಜಸ್ಥಾನ ಮೂಲದ ಮಹಿಪಾಲ್, ಜಿತೇಂದ್ರ ಸಿಂಗ್ ಎಂಬ ಆರೋಪಿಗಳನ್ನು ಬಂಧಿಸಿದೆ. ಬಂಧಿತರು ಬ್ಯಾಂಕ್ ರಿಜನಲ್ ಮ್ಯಾನೇಜರ್ ಅಕೌಂಟ್‌ನಿಂದ ಎಗರಿಸಿದ ಹಣವನ್ನು 29 ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದರಿಂದ ಒಂದೂವರೆ ಲಕ್ಷ ರೂಪಾಯಿ ಅಷ್ಟೇ ರಿಕವರಿ ಆಗಿದೆ.