ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದ ಬಳಿ ಇರುವ ಖಾಸಗಿ ಕಾಲೇಜಿನ ಎಂಬಿಎ ವಿದ್ಯಾರ್ಥಿಯೊಬ್ಬ ಆತಮ್ಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಆತನ ಡೆತ್ನೋಟ್ ಮೂಲಕ ಬಹಿರಂಗಗೊಂಡಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕೇರಳ ಮೂಲದ ಜಗನ್ ಮೋಹನ್ (25) ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಂತಿನಗರದಲ್ಲಿ ಕಾಲೇಜಿಗೆ ಸಮೀಪ ರೂಂ ಬಾಡಿಗೆ ಪಡೆದಿದ್ದ. ಅದೇ ರೂಂನಲ್ಲಿ ಡೆತ್ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀಡಿಯೊ ಕಾಲ್ ಟಾರ್ಚರ್ಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗೊತ್ತಾಗಿದೆ.
ಜಗನ್ ಮೋಹನ್ ಡೆತ್ನೋಟ್ನಲ್ಲಿ ಮೂರು ನಂಬರ್ ಬರೆದಿದ್ದಾನೆ. ಫೇಕ್ ವೀಡಿಯೊ ಕಾಲ್ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. 25,000 ರೂ. ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಬೆತ್ತಲೆ ಪೋಟೋ ಹಾಗೂ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ದಟ್ಟವಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪೋಷಕರ ವಿಚ್ಛೇದನಕ್ಕೆ ನೊಂದು ಯುವಕ ಆತ್ಮಹತ್ಯೆ
ಅಪ್ಪ ಅಮ್ಮನ ವಿಚ್ಚೇದನಕ್ಕೆ ನೊಂದು 26 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ನಡೆದಿದೆ. ರೆಹಮತ್ ನಗರ ಪ್ರದೇಶದಲ್ಲಿ ಅಪ್ನಾನ್ (26) ಆತ್ಮಹತ್ಯೆ ಮಾಡಿಕೊಂಡವ.
ತಾಯಿಗೆ ತಂದೆ ನೀಡಿದ ವಿಚ್ಛೇದನ ನೀಡಿ ಮರುಮದುವೆಯಾಗಿದ್ದು ಯುವಕನನ್ನು ಒಬ್ಬಂಟಿಯಾಗಿಸಿತು, ಇದರಿಂದ ಮಾನಸಿಕವಾಗಿ ಬಹಳ ನೊಂದಿದ್ದ ಎಂದು ಹೇಳಲಾಗಿದೆ. ಅಪ್ನಾನ್ನ ತಾಯಿ ಜಬೀನ್ ತಾಜ್ ಮತ್ತು ತಂದೆ ಅಕ್ಬರ್ ಆಲಿ ನಡುವಿನ ವೈವಾಹಿಕ ಕಲಹ ವಿಚ್ಚೇದನದಲ್ಲಿ ಕೊನೆಯಾಗಿದೆ.. ಬಳಿಕ ತಂದೆ ಬೇರೆ ಮಹಿಳೆಯನ್ನು ಮದುವೆ ಮಾಡಿಕೊಂಡಿದ್ದಕ್ಕೆ ಯುವಕ ಬೇಸರಗೊಂಡಿದ್ದ. ಸಂಬಂಧಿಕರೊಂದಿಗೆ ಇತ್ತೀಚೆಗೆ ನಡೆದ ಗಲಾಟೆಯೂ ಅಪ್ನಾನ್ನ ಮನಸ್ಸನ್ನು ಮತ್ತಷ್ಟು ಕುಗ್ಗಿಸಿತ್ತು ಎಂದು ಸಂಬಂಧಿಕರು ಹೇಳಿದ್ದಾರೆ.
ಸಂಬಂಧಿಕರೊಂದಿಗೆ ಜಗಳ ನಡೆದ ಕೆಲವೇ ಗಂಟೆಗಳ ಬಳಿಕ ಅಪ್ನಾನ್ ಮನೆಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿತ್ತು.


