ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದ ತನಿಖೆಯನ್ನು ಎಫ್ ಎಸ್ ಎಲ್ ವರದಿ ಬರುವವರೆಗೂ ಶೋಧ ಕಾರ್ಯ ತಡೆ ಹಿಡಿಯಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಧರ್ಮಸ್ಥಳದಲ್ಲಿ ಎಸ್ ಐಟಿ ತನಿಖೆ ಕುರಿತು ಮಾತನಾಡಿದ ಅವರು, ದೂರುದಾರ ನೀಡಿದ ದೂರು ಆಧರಿಸಿ ಎಸ್ ಐಟಿ ತನಿಖೆ ನಡೆಸುತ್ತಿದೆ. ತನಿಖೆ ಪ್ರಗತಿ ಹಂತದಲ್ಲಿದ್ದು, ಎಸ್ ಐಟಿ ಮಧ್ಯಂತರ ವರದಿ ಕೂಡ ಕೈ ಸೇರಿಲ್ಲ ಎಂದರು.
ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ 13 ಸ್ಥಳಗಳ ಪರಿಶೀಲನೆ ನಡೆಯುತ್ತಿದೆ. ಹಾಗಂತ ದೂರುದಾರ ಇಡೀ ಧರ್ಮಸ್ಥಳ ಅಗೆಯಬೇಕು ಎಂದರೆ ಅದು ಆಗುವುದಿಲ್ಲ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿ ಎಂದು ಅವರು ಹೇಳಿದರು.
ಎಸ್ ಐಟಿ ದೂರುದಾರ ತೋರಿಸಿದ ಎಲ್ಲಾ ಜಾಗಗಳನ್ನು ಶೋಧಿಸಿದ್ದಾರೆ. ಎರಡು ಸ್ಥಳದಲ್ಲಿ ಆವಶೇಷಗಳು ಪತ್ತೆಯಾಗಿವೆ. ಶವಗಳು ಯಾರದ್ದು? ಕೊಲೆಯೋ, ಆತ್ಮಹತ್ಯೆಯೋ? ಅದು ಯಾರ ಶವ ಎಂದು ತಿಳಿಯಬೇಕಾಗಿದೆ. ಇದಕ್ಕಾಗಿ ಮಣ್ಣು ಮಾದರಿ ಸೇರಿದಂತೆ ಎಲ್ಲವನ್ನೂ ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ. ಎಫ್ ಎಸ್ ಎಲ್ ವರದಿ ಬರುವವರೆಗೂ ತನಿಖೆ ತಡೆ ಹಿಡಿಯಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆಯು ಪಕ್ಷಾತೀತವಾಗಿ ನಡೆಯುತ್ತಿದೆ. ಇಲ್ಲಿ ಸರ್ಕಾರ ಯಾವುದೇ ಮಧ್ಯಪ್ರವೇಶ ಮಾಡಿಲ್ಲ. ಮಾಡುವುದೂ ಇಲ್ಲ. ಎಸ್ ಐಟಿಗೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ನೀಡಲಾಗಿದ್ದು, ಕೇಂದ್ರ ಸರ್ಕಾರದ ನೂತನ ಕಾನೂನು ಪ್ರಕಾರವೇ ತನಿಖೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.