ಧರ್ಮಸ್ಥಳ ಪರಿಸರದಲ್ಲಿ ಶವಗಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಹೂತ ಜಾಗ ಗುರುತಿಸಲು ಹಾಗೂ ಉತ್ಖನನ ನಡೆಸಲು ಇಬ್ಬರು ಸ್ಥಳೀಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡು ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ.
ಸ್ಥಳೀಯರಾದ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಂಬ ಇಬ್ಬರು ಸಾಕ್ಷಿದಾರರು, ನೇತ್ರಾವತಿ ಕಾಡಿನಲ್ಲಿ ಚಿನ್ನಯ್ಯ ಶವವನ್ನು ಹೂಳುವಾಗ ನೋಡಿದ್ದೇವೆ ಎಂದು ಎಸ್‌ಐಟಿಗೆ ದೂರು ನೀಡಿದ್ದರು. ಆದರೆ ಆ ದೂರನ್ನು ಎಸ್‌ಐಟಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರದ ಪರ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಹೈಕೋರ್ಟ್ ನೊಟೀಸ್ ಸ್ವೀಕರಿಸಿದ್ದು, ಗುರುವಾರ ಕೋರ್ಟ್‌ಗೆ ಉತ್ತರ ಸಲ್ಲಿಸುವ ಸಾಧ್ಯತೆ ಇದೆ. ಸ್ಥಳ ಗುರುತು ಮಾಡಿ ಉತ್ಖನನ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ. ಕೋರ್ಟ್ ಕಮಿಷನರ್ ಅಥವಾ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ನಡೆಯುವ ಜೊತೆಗೆ ಹಾಗೂ ತನಿಖೆಯ ಪ್ರತಿ ಹಂತದ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಕೊಲೆಗಳು ಮತ್ತು ಸಾಮೂಹಿಕ ಸಮಾಧಿ ಆರೋಪಗಳ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿದೆ. ದೂರುದಾರರು ಗುರುತಿಸಿದ ಹದಿಮೂರು ಸ್ಥಳಗಳಲ್ಲಿ ಹನ್ನೊಂದು ಸ್ಥಳಗಳ ಉತ್ಖನನ ಮಾಡಲಾಗಿದೆ. ಒಂದರಲ್ಲಿ ಭಾಗಶಃ ಅಸ್ಥಿಪಂಜರ ಮತ್ತು ಇನ್ನೊಂದು ಸ್ಥಳದಲ್ಲಿ ಮಾನವ ತಲೆಬುರುಡೆ ಮತ್ತು ಮೂಳೆಗಳು ಕಂಡುಬಂದಿವೆ. ಹೀಗಾಗಿ ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ ದೂರುದಾರರನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ.
ಬಳಿಕ ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಎಂಬವರು 2005 ರಲ್ಲಿ ಯುವತಿಯ ಶವವನ್ನು ಎಲ್ಲಿ ಹೂಳಲಾಗಿದೆ ಎಂಬುದರ ಬಗ್ಗೆ ತನಗೆ ತಿಳಿದಿತ್ತು ಎಂದು ಹೇಳಿದ್ದು, ಎಸ್‌ಐಟಿ ಅವರನ್ನೂ ವಿಚಾರಣೆ ನಡೆಸುತ್ತಿದೆ. ನ್ಯಾಯಾಧೀಶ ವಿಜಯ ಕುಮಾರ್ ರೈ ಬಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ 800 ಕ್ಕೂ ಹೆಚ್ಚು ಆನ್‌ಲೈನ್ ಲಿಂಕ್‌ಗಳನ್ನು ತೆಗೆದುಹಾಕುವ ಮೂಲಕ ಗ್ಯಾಗ್ ಆದೇಶವನ್ನು ನೀಡಿದ್ದರು.