ಮೂಳೆಗಳು ಸಿಕ್ಕಿದ ಮಾತ್ರಕ್ಕೆ ಗಂಡಸಿನದ್ದಾ ಅಥವಾ ಹೆಂಗಸಿನದ್ದಾ ಅಂತ ಹೇಳಬಹುದು, ಆದರೆ ಸತ್ತ ವ್ಯಕ್ತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆಯೇ ಇಲ್ಲವೇ ಎಂದು ಹೇಳಲು ಬರುವುದಿಲ್ಲ ಎಂದು ಜೆಎಸ್ಎಸ್ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಪ್ರೊ. ಅರುಣ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಎಸ್ಐಟಿ ಕಾರ್ಯಾಚರಣೆ ವೇಳೆ ಸಿಕ್ಕಿರುವ ಮೂಳೆಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದು, ಇದು ಕೊಲೆಯೇ ಅಥವಾ ಸಹಜ ಸಾವೇ ಎಂದು ಹೇಳುವುದಕ್ಕೆ ಒಂದೆರಡು ಮೂಳೆಯಿಂದ ಸಾಧ್ಯವಿಲ್ಲ. ವಯಸ್ಸು ಕೂಡ ನಿಖರವಾಗಿ ಹೇಳಲು ಆಗದು ಎಂದಿದ್ದಾರೆ.
ನಮಗೆ ಪೂರ್ಣ ಅಸ್ಥಿಪಂಜರ ಸಿಕ್ಕರೆ 100% ಖಚಿತ ಮಾಹಿತಿ ಸಿಗುವುದು. ತೊಡೆ ಮೂಳೆ ಸಿಕ್ಕರೆ 80%, ಸೊಂಟದ ಮೂಳೆ ಸಿಕ್ಕರೆ 95% ನಿಖರ ಮಾಹಿತಿ ಪತತ್ತೆ ಸಾಧ್ಯವಾಗಲಿದೆ. ಧರ್ಮಸ್ಥಳದಲ್ಲಿ ಸಿಕ್ಕಿರುವ ಮೂಳೆಗಳು ಮೊದಲು ಮನುಷ್ಯನದ್ದಾ ಅಥವಾ ಪ್ರಾಣಿಯದ್ದಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
10- 15 ವರ್ಷಗಳಲ್ಲಿ ಮನುಷ್ಯನ ಮೂಳೆಗಳು ಮಣ್ಣಿನಲ್ಲಿ ಬಹುತೇಕ ಕರಗುತ್ತವೆ. ಕೆಲವು ಭಾಗದ ಮೂಳೆಗಳು ಅಷ್ಟೇ ಸಿಗಬಹುದು. ತಲೆ ಬುರುಡೆಯೂ ಸಂಪೂರ್ಣವಾಗಿ ಇರಲು ಸಾಧ್ಯವಿಲ್ಲ ಎಂದು ವಿಧಿ ವಿಜ್ಞಾನದ ಪ್ರೊಫೆಸರ್ ಡಾ. ಅರವಿಂದ್ ಹೇಳಿದ್ದಾರೆ.