Menu

ಸೆ.1ರಂದು ಧರ್ಮಸ್ಥಳ ಚಲೋ, ಬೃಹತ್ ಸಮಾವೇಶ: ಬಿವೈ ವಿಜಯೇಂದ್ರ

by vijayenbdra

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ಸಂಪೂರ್ಣ ತನಿಖೆಯನ್ನು ಕೂಡಲೇ ಎನ್‍ಐಎಗೆ ಕೊಡಿ ಎಂದು ಕೋಟ್ಯಂತರ ಸದ್ಭಕ್ತರು, ಹಿಂದೂಗಳ ಪರವಾಗಿ ಮುಖ್ಯಮಂತ್ರಿಗಳನ್ನು ಆಗ್ರಹಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಮಾತನಾಡಿದ ಅವರು, ಎನ್‍ಐಎ ತನಿಖೆ ಮಾಡಿದರೆ ರಾಜ್ಯ ಸರಕಾರದ ಬಗ್ಗೆ ಜನರಿಗೆ ಮತ್ತು ಅಪಾರ ಭಕ್ತರಿಗೆ ವಿಶ್ವಾಸ ಬರಲಿದೆ. ಆದ್ದರಿಂದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಆಗ್ರಹ ಮುಂದಿಟ್ಟು ಸೆ. 1ರಂದು ಸೋಮವಾರ ಧರ್ಮಸ್ಥಳ ಚಲೋಗೆ ಕರೆ ನೀಡುತ್ತಿರುವುದಾಗಿ ಪ್ರಕಟಿಸಿದರು.

ಹಿಂದೂ ಭಾವನೆಗೆ ಧಕ್ಕೆ ತಂದ ಸರಕಾರದ ಕಿವಿ ಹಿಂಡುವ ಕೆಲಸ ಆಗಬೇಕಿದೆ. ಎನ್‍ಐಎ ತನಿಖೆಯ ಆಗ್ರಹದ ಬೇಡಿಕೆ ಮುಂದಿಟ್ಟು ರಾಜ್ಯದ ಸಮಸ್ತ ಹಿಂದೂ ಸಮಾಜವು ಇದರಲ್ಲಿ ಪಾಲ್ಗೊಳ್ಳಬೇಕು. ಸೆ. 1ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ ಎಂದು ತಿಳಿಸಿದರು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ, ಎಲ್ಲ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಧರ್ಮಸ್ಥಳಕ್ಕೆ ಬರಲಿದ್ದಾರೆ. ಲಕ್ಷಾಂತರ ಜನರು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸ್ಥಳಕ್ಕೆ ಹೊರಡುವ ದಿನ ಹಿಂದೂ ಸಮಾಜದವರು ತಮ್ಮ ನಗರ, ಗ್ರಾಮಗಳಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಸ್ಥಳೀಯವಾಗಿ ಮೆರವಣಿಗೆ ಮಾಡಿ ಆಗಮಿಸಬೇಕಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಮೂಡಿಸುವ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡುವ ಬೃಹತ್ ಸಮಾವೇಶ ನಡೆಯುತ್ತದೆ ಎಂದು ಹೇಳಿದರು.

ಧರ್ಮಸ್ಥಳದ ಘಟನೆಯಿಂದ ಸರಕಾರಕ್ಕೆ ಕಳಂಕ ಬಂದಿದೆ. ಆ ಕಳಂಕದಿಂದ ಹೊರಗೆ ಬರಬೇಕಿದೆ. ಈ ದುಷ್ಕøತ್ಯದ ಹಿಂದೆ ಇರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸಮರ್ಪಕ ತನಿಖೆ ಆಗಬೇಕಿದೆ. ಎಂದು ತಿಳಿಸಿದರು. ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳು ಇದೇರೀತಿ ಇನ್ನೊಂದು ಹಿಂದೂ ದೇವಾಲಯದ ವಿರುದ್ಧ ಷಡ್ಯಂತ್ರ ಮಾಡಬಹುದು ಎಂದು ತಿಳಿಸಿದರು.

ಧರ್ಮಸ್ಥಳ ಪವಿತ್ರ ಶ್ರೀ ಕ್ಷೇತ್ರದ ಕುರಿತು ದಾರಿಯಲ್ಲಿ ಹೋಗುವ ಬುರುಡೆ ಹಿಡಿದ ವ್ಯಕ್ತಿಯೊಬ್ಬ ಬಂದು ಬುರುಡೆ ಹೊಡೆದರೆ ಆ ವ್ಯಕ್ತಿಯ ಹಿನ್ನೆಲೆ ಏನು? ಅವನ ಹಿಂದಿರುವ ಶಕ್ತಿಗಳು, ಯಾವ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ಸಂಗ್ರಹಿಸಬೇಕಿತ್ತು. ಅಥವಾ ಬೇಹುಗಾರಿಕಾ ದಳದಿಂದ ವರದಿ ಪಡೆದು ಮುಖ್ಯಮಂತ್ರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದು ನುಡಿದರು.

ಧರ್ಮಸ್ಥಳದ ವಿಷಯದಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ಸದ್ದು ಮಾಡಿವೆ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರೋ ಒಬ್ಬ ವ್ಯಕ್ತಿ ದೂರು ನೀಡುತ್ತಾನೆಂದು ತಿಳಿದಾಗ ತಕ್ಷಣ ಎಸ್‍ಐಟಿಗೆ ನೀಡುವ ಘೋಷಣೆ ಮಾಡಲಾಗಿತ್ತು ಎಂದು ಆಕ್ಷೇಪಿಸಿದರು.

ಸಿಎಂ ರಾತ್ರೋರಾತ್ರಿ ತಮ್ಮ ನಿರ್ಧಾರ ಬದಲಿಸಿದರೇಕೆ?

ದಕ್ಷಿಣ ಕನ್ನಡದ ಪೊಲೀಸರೇ ತನಿಖೆ ಮಾಡಲಿದ್ದಾರೆ ಎಂದು ಒಂದು ದಿನ ಮುಖ್ಯಮಂತ್ರಿಗಳು ಮತ್ತು ಸಚಿವರು ಹೇಳಿದ್ದರು. ಮತ್ತೆ ಮರುದಿನವೇ (ಶನಿವಾರ) ಯಾವುದೇ ಕಾರಣಕ್ಕೆ ಎಸ್‍ಐಟಿಗೆ ಕೊಡುವುದಿಲ್ಲ ಎಂದಿದ್ದರು. ಭಾನುವಾರ ಮುಖ್ಯಮಂತ್ರಿಗಳು ಎಸ್‍ಐಟಿ ತನಿಖೆ ನಡೆಯಲಿದೆ ಎಂದು ಪ್ರಕಟಿಸಿದ್ದಾರೆ. ಶನಿವಾರ ಯಾವುದೇ ಕಾರಣಕ್ಕೆ ತನಿಖೆಯನ್ನು ಎಸ್‍ಐಟಿಗೆ ಕೊಡುವುದಿಲ್ಲ ಎಂದಿದ್ದ ಮುಖ್ಯಮಂತ್ರಿಗಳು, ಭಾನುವಾರ ಎಸ್‍ಐಟಿ ತನಿಖೆ ಘೋಷಿಸಿದ್ದಾರೆ. ರಾತ್ರೋರಾತ್ರಿ ಮುಖ್ಯಮಂತ್ರಿಗಳ ನಿಲುವಿನಲ್ಲಿ ಬದಲಾವಣೆ ಆಗಿರುವುದಕ್ಕೆ ಕಾರಣಗಳಾದರೂ ಏನು? ಯಾವ್ಯಾವ ಸಂಘಟನೆಗಳು, ವ್ಯಕ್ತಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ? ಮುಖ್ಯಮಂತ್ರಿಗಳು ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಪರಾಮರ್ಶೆ ಮಾಡದೇ ರಾತ್ರೋರಾತ್ರಿ ತಮ್ಮ ನಿರ್ಧಾರವನ್ನು ಬದಲಿಸಿದರು ಎಂದು ವಿಜಯೇಂದ್ರ ಅವರು ಕೇಳಿದರು. ಇವೆಲ್ಲವೂ ಇವತ್ತು ಬಹಿರಂಗ ಆಗಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ? ಧರ್ಮಸ್ಥಳ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಯ ಬಗ್ಗೆ ಎಷ್ಟು ಶ್ರದ್ಧೆ ಇದೆ? ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಧರ್ಮಸ್ಥಳ ಮಂಜುನಾಥೇಶ್ವರ, ಅಣ್ಣಪ್ಪ ಸ್ವಾಮಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಈ ಭಕ್ತರಿಗೆ ಧರ್ಮಸ್ಥಳ ಒಂದು ಪವಿತ್ರ ಶ್ರೀ ಕ್ಷೇತ್ರ; ಧರ್ಮಸ್ಥಳ ಕೇವಲ ಒಂದು ಮಂದಿರವಲ್ಲ; ಹಲವಾರು ದಶಕಗಳಿಂದ ಶ್ರದ್ಧಾಭಾವನೆ ಇದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿದಿರುವುದಾಗಿ ಭಾವಿಸಿದ್ದೇನೆ ಎಂದು ನುಡಿದರು.

ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಪುಕ್ಕಟೆ ಪ್ರಚಾರ ಪಡೆಯುವ ಹುನ್ನಾರದ ಪರಿಣಾಮವಾಗಿ 11 ಮುಗ್ಧ ಜನರು ಪ್ರಾಣ ಕಳಕೊಂಡಿದ್ದರು. 30- 40 ಜನರಿಗೆ ಗಂಭೀರ ಗಾಯಗಳಾಗಿದ್ದವು. ಅದೇರೀತಿ, ಧರ್ಮಸ್ಥಳದ ವಿಷಯದಲ್ಲಿ ಮುಖ್ಯಮಂತ್ರಿಗಳು ಆತುರದ ನಿರ್ಧಾರ ಮಾಡಿದ್ದಾರೆ. ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದು ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ ಆಗಿದೆ ಎಂದು ನುಡಿದರು. ಭಕ್ತರಲ್ಲಿ ತೀವ್ರ ನೋವು ಕಾಡುತ್ತಿದೆ ಎಂದು ತಿಳಿಸಿದರು.

ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಕೆ. ಗೋಪಾಲಯ್ಯ, ಶಾಸಕ ಎಸ್.ಆರ್. ವಿಶ್ವನಾಥ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಅವರು ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *