“ಮುಸುಕುಧಾರಿ ನ್ಯಾಯಾಲಯದಲ್ಲಿ ದೂರು ಕೊಟ್ಟಾಗ ಮಾತನಾಡದ ಬಿಜೆಪಿಗರು ಈಗ ರಾಜಕೀಯ ಮಾಡುತ್ತಿದ್ದಾರೆ. ಹಿಂದುತ್ವ ತಮ್ಮ ಮನೆ ಆಸ್ತಿ ಎಂದು ಅವರು ಭಾವಿಸಿದ್ದಾರೆ. ಬಿಜೆಪಿಯವರಿಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ಅವರಿಗೆ ಬರೀ ರಾಜಕೀಯಕ್ಕಾಗಿ ಧರ್ಮಸ್ಥಳ ಬೇಕಾಗಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರ ನಿಯೋಗ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದೆ ಎಂದು ಕೇಳಿದ ಪ್ರಶ್ನೆಗೆ, “ಬಿಜೆಪಿಯವರು ಆರಂಭದಲ್ಲಿ ಏನೂ ಮಾತನಾಡಿರಲಿಲ್ಲ. ಈಗ ರಾಜಕಾರಣ ಮಾಡುತ್ತಿದ್ದಾರೆ. ಅವರು ಹಿಂದುತ್ವವನ್ನು ಅವರ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ಇದು ಯಾರೊಬ್ಬರ ಆಸ್ತಿಯಲ್ಲ. ಅವರವರ ಭಕ್ತಿ, ನಂಬಿಕೆ ಭಾವನೆಗೆ ಸಂಬಂಧಿಸಿದ್ದು. ಬಿಜೆಪಿಯವರದ್ದು ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ” ಎಂದು ಟೀಕಿಸಿದರು.
“ಮುಸುಕುಧಾರಿ ದೂರು ಕೊಟ್ಟ ದಿನ ಬಿಜೆಪಿಯವರು ಯಾಕೆ ಮಾತನಾಡಲಿಲ್ಲ? ಆತನ ದೂರು ಸರಿಯಿಲ್ಲ ಎಂದು ಯಾಕೆ ಹೇಳಲಿಲ್ಲ? ಎಸ್ಐಟಿ ರಚಿಸಿದ ಮೊದಲ ದಿನ ಯಾಕೆ ಮಾತನಾಡಲಿಲ್ಲ ನಮಗೆ ರಾಜಕೀಯಕ್ಕೆ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ ಎನ್ನುವವರು ನಾವು. ನ್ಯಾಯಾಲಯದ ಮುಂದೆ ದೂರು ನೀಡಿದ ನಂತರವೂ ಸರ್ಕಾರ ತನಿಖೆ ಮಾಡದಿದ್ದರೇ ಬಿಜೆಪಿಯವರು ಏನು ಹೇಳುತ್ತಿದ್ದರು? ಅವರೇ ಟೀಕೆ ಮಾಡುತ್ತಿರಲಿಲ್ಲವೇ? ಈಗ ಈ ರೀತಿ ರಾಜಕಾರಣ ಮಾಡುತ್ತಿದ್ದು, ನಾವು ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ತಿಳಿಸಿದರು.
ಮುಸುಕುಧಾರಿ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಅವರು ಏನಾದರೂ ಆಗ್ರಹ ಮಾಡಲಿ, ಮಂಪರು ಪರೀಕ್ಷೆ ಅಥವಾ ಬೇರೆ ಯಾವುದೇ ತನಿಖೆಗೆ ಬೇಕಾದರೂ ಆಗ್ರಹಿಸಲಿ. ಅದು ತಪ್ಪಲ್ಲ. ಎಸ್ಐಟಿ ತನಿಖೆ ಸ್ವಾಗತಿಸಿದವರು ಇಂದು ಈ ರೀತಿ ಮಾತನಾಡುತ್ತಿದ್ದಾರೆ. ಎಷ್ಟು ಗುಂಡಿ ತೆಗೆಯಬೇಕು, ಬೇಡ ಎಂದು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ತನಿಖೆಯಲ್ಲಿ ನಾವೇಕೆ ಹಸ್ತಕ್ಷೇಪ ಮಾಡಬೇಕು?” ಎಂದು ಮರುಪ್ರಶ್ನಿಸಿದರು.
ಬಿಜೆಪಿಯವರಿಗೆ ಮುನ್ನ ಧರ್ಮಸ್ಥಳದ ಪರ ನಮ್ಮ ನಾಯಕರು ಧ್ವನಿ ಎತ್ತಿದ್ದಾರೆ
ನಿಮ್ಮ ಷಡ್ಯಂತ್ರ ಹೇಳಿಕೆಯನ್ನು ಬಿಜೆಪಿ ನಾಯಕರು ಸ್ವಾಗತ ಮಾಡಿದ್ದಾರೆ ಎಂದು ಕೇಳಿದಾಗ, “ನನಗೆ ವೈಯಕ್ತಿಕವಾಗಿ ಇರುವ ಅನುಭವದ ವಿಚಾರ ನಾನು ಹೇಳಿದ್ದೇನೆ. ಆದರೆ ಸರ್ಕಾರಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನನಗೆ ಇಷ್ಟವಿಲ್ಲ. ಬಿಜೆಪಿ ಶಾಸಕರು ಸದನದಲ್ಲಿ ಮಾತನಾಡಿರಬಹುದು. ಅದಕ್ಕೂ ಮುನ್ನ ನಮ್ಮ ಶಾಸಕರು ಶಾಸಕಾಂಗ ಸಭೆಯಲ್ಲೇ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ. ಆ ಭಾಗದ ಕಾಂಗ್ರೆಸ್ ನಾಯಕರು ಆರಂಭದಲ್ಲೇ ಬಂದು ನಮ್ಮನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಅಧಿಕಾರದಲ್ಲಿರುವ ಸರ್ಕಾರ ಈ ವಿಚಾರವನ್ನು ಚರ್ಚಿಸಬಾರದು ಎಂದು ಮಾತನಾಡಿರಲಿಲ್ಲ. ನಮ್ಮ ಮುಖ್ಯಮಂತ್ರಿಗಳು ಕೂಡ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಕಾನೂನು ಪ್ರಕಾರ ತನಿಖೆ ಆಗುತ್ತದೆ. ತಪ್ಪು ಸಂದೇಶ ನೀಡಿ, ಅಪಪ್ರಚಾರ ಮಾಡಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕುಮ್ಮಕ್ಕು ನೀಡುತ್ತಿರುವವನು ಮುಖ್ಯಮಂತ್ರಿಗಳನ್ನೇ ಕೊಲೆಗಾರ ಎಂದಿದ್ದಾನೆ. ಆತನ ಬಗ್ಗೆ ನೀವು ವರದಿ ಮಾಡಿದ್ದೀರಾ? ಇದೆಲ್ಲದರ ಮಾಹಿತಿ ನಮ್ಮ ಬಳಿ ಇದೆ” ಎಂದು ಹೇಳಿದರು.
ಗುಂಡಿ ಅಗೆಯುವುದನ್ನು ನಿಲ್ಲಿಸುತ್ತೀರಾ ಎಂದು ಕೇಳಿದಾಗ, “ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾರು ತನಿಖೆ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇದಕ್ಕೆಂದು ಗೃಹ ಸಚಿವರಿದ್ದು, ಅವರು ನಿಭಾಯಿಸುತ್ತಾರೆ. ಈ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ. ನಾವು ನಮ್ಮ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತೇವೆ. ಅಲ್ಲಿ ನೂರಾರು ಜನ ಇರುತ್ತಾರೆ, ನಮಗೆ ಪೊಲೀಸರಿಂದಲೇ ಮಾಹಿತಿ ಬರಬೇಕು ಎಂದೇನಿಲ್ಲ” ಎಂದು ತಿಳಿಸಿದರು.
ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಸಿಗಲಿ
ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿಗಳ ನಿಧನದ ಬಗ್ಗೆ ಕೇಳಿದಾಗ “ಚಂದ್ರಶೇಖರ ಸ್ವಾಮೀಜಿಗಳು ನಮ್ಮ ಸಮಾಜದ ಹಿರಿಯ ಸ್ವಾಮಿಗಳು. ಬಹಳ ತಾಳ್ಮೆಯಿಂದ ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಸೇವೆ ಮಾಡಿಕೊಂಡು ಬಂದಿದ್ದರು. ಅವರು 25 ವರ್ಷಗಳಿಂದ ಮಠವನ್ನು ಮುನ್ನಡೆಸಿ ಈಗ ಯುವ ಸ್ವಾಮೀಜಿಗೆ ಜವಾಬ್ದಾರಿ ವಹಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಚಂದ್ರಶೇಖರ ಸ್ವಾಮೀಜಿಗಳು ನೀವು ಸಿಎಂ ಆಗಬೇಕು ಎಂದು ಆಶೀರ್ವಾದ ಮಾಡಿದ್ದರ ಬಗ್ಗೆ ಕೇಳಿದಾಗ, “ಅವರು ನಿರ್ಮಲ ಮನಸ್ಸಿನಿಂದ ನನಗೆ ಆಶೀರ್ವಾದ ಮಾಡಿದ್ದರು. ನನಗೆ ಅವರ ಮೇಲೆ ಅಪಾರವಾದ ಗೌರವವಿದೆ” ಎಂದು ತಿಳಿಸಿದರು.