ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್ಗೂ ಎಸ್ಐಟಿ ನೋಟಿಸ್ ನೀಡಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್ನನ್ನು ಎಸ್ಐಟಿ ಈಗಾಗಲೇ ವಿಚಾರಣೆ ನಡೆಸಿದೆ.
ಯೂಟ್ಯೂಬರ್ ಮನಾಫ್, ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ಯೂಟ್ಯೂಬ್ನಲ್ಲಿ ಸುಳ್ಳು ಕಥೆ ಹರಿಯಬಿಟ್ಟಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿ ಹೂಳಲಾಗಿದೆ ಎಂದು ಪ್ರಚಾರ ಮಾಡಿದ್ದ.
ಕಾಡಿನಿಂದ ಬುರುಡೆ ತಂದಿರುವ ಮೂಲ ವೀಡಿಯೊ ಮನಾಫ್ ಯುಟ್ಯೂಬ್ನಲ್ಲಿ ಜುಲೈ 11 ರಂದು ಅಪ್ಲೋಡ್ ಆಗಿತ್ತು. ಬಂಗ್ಲೆಗುಡ್ಡೆಯಿಂದಲೇ ಬುರುಡೆ ತಂದಿರುವುದಾಗಿ ಜಯಂತ್ ಟಿ. ಹೇಳಿದ್ದಾರೆ. ಕಾಡು ಪ್ರದೇಶದಲ್ಲಿ ಶೂಟ್ ಮಾಡಿರುವ ವೀಡಿಯೊ ಇದಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಪತ್ತೆಯಾಗಿರುವ ಬುರುಡೆಯನ್ನು ಕತ್ತಿ ಮೂಲಕ ಎತ್ತಿಕೊಂಡು ತಂದಿರುವ ದೃಶ್ಯವನ್ನು ತೋರಿಸಲಾಗಿತ್ತು.
ಪ್ರಕರಣ ಆರಂಭಕ್ಕೂ ಮೊದಲೇ ಮನಾಫ್ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಾಮುತ್ತಾ ಓಡಾಡಿದ್ದ. ಮಹೇಶ್ ತಿಮರೋಡಿ ಮನೆಗೂ ಭೇಟಿ ನೀಡಿದ್ದ ಎಂಬುದು ಗೊತ್ತಾಗಿದೆ. ಬಳ್ಲಾರಿ ಮೂಲದ ಬೆಂಗಳೂರು ನಿವಾಸಿ ಯೂಟ್ಯೂಬರ್ ಸಮೀರ್ ವಿರುದ್ಧವೂ ಎಸ್‌ಐಟಿ ವಿಚಾರಣೆ ನಡೆಸುತ್ತಿದೆ.