ಧರ್ಮಸ್ಥಳದಲ್ಲಿ ಸಾಲು ಸಾಲಾಗಿ ಶವಗಳನ್ನು ಹೂತಿಡಲಾಗಿದೆ ಎಂಬ ಗುಮಾನಿ ಇನ್ನೂ ತಿಳಿಯಾಗಿಲ್ಲ. ಕಳೆದ ಎರಡು ವಾರಗಳಿಂದ ಪೊಲೀಸರು ಈ ದಿಶೆಯಲ್ಲಿ ನಡೆಸಿದ ತನಿಖೆ ಇದುವರೆಗೆ ಯಾವುದೇ ತರ
ತಾರ್ಕಿಕ ಅಂತ್ಯ ಕಂಡಿಲ್ಲ.
ಮುಸುಕುಧಾರಿ ತೋರಿಸಿದ ಹದಿನಾರು ಪಾಯಿಂಟ್ ಪೈಕಿ ಹದಿಮೂರು ಪಾಯಿಂಟುಗಳಲ್ಲಿ ಪೊಲೀಸರು ಜೆಸಿಬಿ ಮೂಲಕ ಗುಂಡಿಗಳನ್ನು ತೆಗೆದರೂ ಇದುವರೆಗೆ ಈ ಜಾಗಗಳಲ್ಲಿ ಮೃತದೇಹಗಳು ಮತ್ತು ಅಸ್ಥಿಪಂಜರಗಳು ಯಾವುದೂ ಪತ್ತೆಯಾಗಿಲ್ಲ . ಮಳೆಯಲ್ಲಿಯೂ ಭಾರಿ ಯಂತ್ರಗಳ ಮೂಲಕ ಗುಂಡಿಗಳನ್ನು ತೋಡುವ ಕೆಲಸ ಬಿರುಸಿನಿಂದ ನಡೆದಿದ್ದು ಇದರಿಂದ ಅಸ್ಥಿಪಂಜರ ರಹಸ್ಯವನ್ನು ಭೇದಿಸಲಾಗಲಿಲ್ಲ. ಇಲ್ಲಿ ಕೆಲವು ಅಮಾಯಕರನ್ನು ಕೊಂದು ಇವರ ದೇಹಗಳನ್ನು ರಹಸ್ಯವಾಗಿ ಹೂತಿಡಲಾಗಿದೆ. ಹೆಣ್ಣು ಮಕ್ಕಳನ್ನು ಕೊಂದು ಅವರ ದೇಹಗಳನ್ನು ಸಮಾಧಿ ಮಾಡಲಾಗಿದೆ . ಇದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಅನಾಮಿಕ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಿರ್ದಿಷ್ಟವಾಗಿ ಮಾಡಿರುವ ಆರೋಪ. ಇಂತಹ ಆರೋಪ ಮಾಡಿದ ಮತ್ತು ಹೇಳಿಕೆಗಳನ್ನು ನೀಡಿದ ವ್ಯಕ್ತಿಗೆ ಪೊಲೀಸರು ಯಾರ ಗುರುತು ಮತ್ತು ಚಹರೆ ತಿಳಿಯಬಾರದೆಂದು ಮುಖವಾಡ ಹಾಕಿರುವುದು ಸರಿಯಷ್ಟೆ.
ದೂರುದಾರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಡಿರುವ ಗಂಭೀರ ಆರೋಪಗಳ ಪ್ರಕಾರ , ಯಾವುದೂ ಈಗ ಪ್ರತ್ಯಕ್ಷವಾಗಿ ಗೋಚರಿಸದಿರುವುದು ಗಂಭೀರ. ಹಾಗಾದರೆ ದೂರುದಾರ ಪೊಲೀಸರಿಗೆ ನೀಡಿರುವ ದೂರು ಸತ್ಯಕ್ಕೆ ದೂರವೇ? ಇಂತಹ ದೂರಿನ ಹಿಂದೆ ಬೇರೆ ಯಾವುದಾದರೂ ಸಂಚು ಅಥವಾ ಷಡ್ಯಂತ್ರ ಇದೆಯೇ ಎಂಬ ನಾನಾ ತರಹೆಯ ಅನುಮಾನ ಮತ್ತು ಶಂಕೆಯೂ ಮೂಡುತ್ತಿದೆ. ಸೂಚಿತ ಜಾಗದಲ್ಲಿ ಹದಿಮೂರಕ್ಕೂ ಅಧಿಕ ಪಾಯಿಂಟುಗಳಲ್ಲಿ ಗುಂಡಿಗಳನ್ನು ತೋಡಿದರೂ ಹೂತಿಡಲಾದ ಮೃತದೇಹಗಳ ಗುರುತರ ವಸ್ತುಗಳಾವುದೂ ಪತ್ತೆಯಾಗಿಲ್ಲ. ಹೀಗಾಗಿ ಇದುವರೆಗೆ ಪೊಲೀಸರು ಇಲ್ಲಿ ಎಸಗಿದ ಒಟ್ಟಾರೆ ಕಾರ್ಯಾಚರಣೆಯೇ ವ್ಯರ್ಥ ಎಂಬ ಟೀಕೆಗಳೂ ಈಗ ವ್ಯಕ್ತವಾಗುತ್ತಿವೆ. ಧರ್ಮ ಕ್ಷೇತ್ರದಲ್ಲಿ ಇಂತಹ ಘಟನೆಗಳು ನಡೆಯುವುದೇ ? ಇದು ನಂಬಲು ಸಾಧ್ಯವೇ ಎಂಬ ಸಾರ್ವತ್ರಿಕ ಸಂದೇಹಗಳೂ ಸಾರ್ವಜನಿಕರನ್ನು ಕಾಡುತ್ತಿದೆ. ಏಕೆಂದರೆ ಲಕ್ಷಾಂತರ ಮಂದಿ ಭಕ್ತರ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಧರ್ಮಸ್ಥಳದ ಮೇಲೆ ಬಂದಿರುವ ಈ ಆರೋಪಗಳಿಂದ ಮುಕ್ತವಾಗಬೇಕಿರುವುದೂ ಅತಿಮುಖ್ಯ.
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾಗಿ ಆಡಳಿತ ಮತ್ತು ವಿಪಕ್ಷ ನಾಯಕರು ಖಂಡಿಸಿರುವುದು ಗಮನಾರ್ಹ. ಧರ್ಮಸ್ಥಳದ ವಿಚಾರದಲ್ಲಿ ರಾಜಕೀಯ ನುಸಳಬಾರದು. ಏಕೆಂದರೆ ಕೆಲವೊಮ್ಮೆ ಧಾರ್ಮಿಕ ಸ್ಥಳಗಳಲ್ಲಿ ತಲೆಯೆತ್ತುವಂತಹ ಇಂತಹ ಸಂದಿಗ್ದ ಘಟನೆಗಳಿಂದ ಧಾರ್ಮಿಕ ಶ್ರದ್ಧೆ ಇರುವಂತಹ ಮನಸುಗಳ ಮೇಲೆ ಗಂಭೀರ ಪರಿಣಾಮ ಬೀರುವುದು ಖಂಡಿತ. ಪೊಲೀಸ್ ತನಿಖೆಗಳಿಂದ ಸತ್ಯ ಬಯಲಾಗಬೇಕಿದೆ. ಆದರೆ ಈಗಿನ ತನಿಖೆಯಿಂದ ಸತ್ಯವನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ವಿಷಯದಲ್ಲಿ ಸರ್ಕಾರದ ಮುಂದಿನ ತೀರ್ಮಾನವೇನು ? ಇದು ಕೂಡಾ ಜನತೆಗೆ ತಿಳಿಯಾಗಬೇಕಿದೆ.