Menu

ಧರ್ಮಸ್ಥಳ ಪ್ರಕರಣ: ಸುಳ್ಳು ಆಪಾದನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಸೂಚನೆ ಎಂದ ಡಿಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ.

ವಿಧಾನಸಭೆ ಕಲಾಪದ ವೇಳೆ ನಡೆದ ಚರ್ಚೆ ಸಮಯದಲ್ಲಿ ಮಾತನಾಡಿದ ಅವರು, “ಜವಾಬ್ದಾರಿಯುತ ದಕ್ಷ ಹಿರಿಯ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿದೆ. ಮುಖ್ಯಮಂತ್ರಿಗಳು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿ ಪ್ರತಿವರ್ಷ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಅವರಿಗೂ ಆ ಕ್ಷೇತ್ರದ ಮೇಲೆ ನಂಬಿಕೆಯಿದೆ. ಸಿಎಲ್ ಪಿ ಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡರು ಹಾಗೂ ಬೇಳೂರು ಗೋಪಾಲಕೃಷ್ಣ ಅವರು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ” ಎಂದರು.

“ಧರ್ಮಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿದ್ದು ಯಾರಿಗೆ ಯಾವ ರೀತಿ ಬಲಿ ತೆಗೆದುಕೊಳ್ಳಬೇಕೋ, ಯಾವ ಕಾನೂನು ಬಳಸಬೇಕೋ ಅದನ್ನು ಮಾಡಲಾಗುತ್ತದೆ. ಗೃಹಸಚಿವರು ಇದಕ್ಕೆ ಬದ್ದವಾಗಿದ್ದಾರೆ. ಈ ವಿಚಾರದಲ್ಲಿ ಒಂದೆರಡು ದಿನ ಸುಮ್ಮನಿರಿ. ನೀವೆಲ್ಲರೂ ತಾಳ್ಮೆವಹಿಸಿ” ಎಂದು ಪ್ರತಿಪಕ್ಷಗಳಿಗೆ ಆಗ್ರಹಿಸಿದರು. ಪ್ರತಿಪಕ್ಷದವರು ಮೊದಲೇ ಎಸ್ ಐಟಿ ರಚನೆ ಬೇಡ ಎಂದು ಹೇಳಬೇಕಿತ್ತು. ಆದರೆ ಹದಿನೈದು ದಿನ ಕಳೆದ ನಂತರ ಹೇಳುತ್ತಾ ಇದ್ದೀರಿ. ಈ ವಿಚಾರದಲ್ಲಿ ಮೊದಲು ನೀವು ಮಾತನಾಡಿಯೇ ಇಲ್ಲ. ದಿನಬೆಳಗಾದರೆ ನಿಮ್ಮ (ಪ್ರತಿಪಕ್ಷಗಳ ನಾಯಕರು) ಮುಖ್ಯಮಂತ್ರಿಗಳ ಮೇಲೆ, ನನ್ನ ಮೇಲೆ ಸೇರಿದಂತೆ ಅನೇಕರ ಮೇಲೆ ಯಾರೋ ಒಬ್ಬ ಆಪಾದನೆ ಮಾಡಿದ್ದಾರೆ. ಇದರಲ್ಲಿ ಷಡ್ಯಂತ್ರ ಇರಬಹುದು. ಇದೆಲ್ಲವೂ ಆಚೆ ಬರಬೇಕು ಅದಕ್ಕಾಗಿ ಗೃಹಸಚಿವರು ಕಾನೂನಿನ ಅಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

“ಯಾವುದೇ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಗೃಹಸಚಿವರು ಪ್ರಮಾಣ ವಚನ ತೆಗೆದುಕೊಂಡಿರುತ್ತಾರೆ. ವಿರೋಧ ಪಕ್ಷದಲ್ಲಿ ಇರುವ ನೀವುಗಳು ಸಹ ಅಧಿಕಾರದಲ್ಲಿದ್ದವರು. ತನಿಖೆ ವಿಚಾರವನ್ನು ಬಹಿರಂಗಪಡಿಸುವ ಮೊದಲು ಎಲ್ಲರೂ ತಾಳ್ಮೆಯಿಂದ ಇರಬೇಕು. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಇದರಲ್ಲಿ ರಾಜಕೀಯ ಮಾಡಬೇಡಿ” ಎಂದರು.

ತಪ್ಪು ಯಾರೇ ಮಾಡಿದ್ದರು ಶಿಕ್ಷೆ ಆಗಿಯೇ ಆಗುತ್ತದೆ. ಸೌಜನ್ಯ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಯಲಿ ಎಂದು ಪ್ರತಿಪಕ್ಷವರು ಹೇಳಿದರು. ನಾವು ಅದನ್ನು ಗೌರವಿಸಿದೆವು. ಕೊನೆಗೆ ನ್ಯಾಯಲಯ ಹಾಗೂ ಸಿಬಿಐ ನವರು ಅಂತಿಮ ತೀರ್ಪು ನೀಡಿದಾಗ ಏನೂ ಇಲ್ಲ ಎಂದು ತಿಳಿಯಿತು. ತನಿಖೆ ಯಾವ ಕಾರಣಕ್ಕೆ ಪ್ರಾರಂಭವಾಗುತ್ತದೆ ಎಂಬುದು ಪ್ರತಿಪಕ್ಷಗಳಿಗೂ ತಿಳಿದಿದೆ. ಧರ್ಮಸ್ಥಳ ವಿಚಾರದಲ್ಲಿ ಸರಿತಪ್ಪುಗಳಿವೆಯೋ, ಷಡ್ಯಂತ್ರವಿದೆಯೋ ಎಂಬುದು ತನಿಖೆ ನಂತರ ತಿಳಿಯುತ್ತದೆ. ವ್ಯಕ್ತಿಯೊಬ್ಬ ತಲೆಬುರುಡೆ ಹಿಡಿದುಕೊಂಡು ನ್ಯಾಯಲಯದ ಮುಂದೆ ಹೇಳಿಕೆ ನೀಡಿದ ಮೇಲೆ ಇದನ್ನು ಇಡೀ ದೇಶ ನೋಡಿತು. ಜೊತೆಗೆ ಎಲ್ಲಾ ಮಾಧ್ಯಮಗಳು ಇದರ ಬಗ್ಗೆ ಗಮನ ಸೆಳೆಯಿತು ಎಂದರು.

ಷಡ್ಯಂತ್ರ ಮಾಡಿದವರು ಯಾರು ಎಂದು ಉಪಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದಾಗ, “ತನಿಖೆ ಮುಗಿದ ನಂತರ ನೂರಕ್ಕೆ ನೂರರಷ್ಟು ಅವರ ಹೆಸರು, ಫೋಟೋ ಎಲ್ಲವೂ ಆಚೆ ಬರುತ್ತದೆ” ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯವರು, ನಾನು ಸೇರಿದಂತೆ ಅನೇಕರನ್ನು ಟೀಕೆ ಮಾಡುತ್ತಿರುವವರ ಹೆಸರುಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅವರನ್ನು ದೊಡ್ಡ ನಾಯಕರಂತೆ ಬಿಂಬಿಸುವುದು ಬೇಡ ವಿರೋಧ ಪಕ್ಷಗಳ ಶಾಸಕರಿಗೆ ಕಿವಿಮಾತು ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಹಕ್ಕಿಗೆ ಚ್ಯುತಿ ತರುತ್ತಿದ್ದಾರೆ. ಹೀಗಾಗಿ ನಾನು ಹಕ್ಕುಚ್ಯುತಿ ನಿರ್ಣಯ ಮಂಡಿಸುತ್ತೇನೆ’ ಎಂದರು. ಈ ವೇಳೆ ವಿರೋಧ ಪಕ್ಷಗಳ ಶಾಸಕರು, ಕೆಲವರು ಮುಖ್ಯಮಂತ್ರಿಗಳನ್ನು ಕೊಲೆಗಡುಕ ಎಂದು ಹೇಳಿದ್ದರೂ ಸರ್ಕಾರ ಸುಮ್ಮನೆ ಕೂತಿದೆ ಎಂದು ಧ್ವನಿಗೂಡಿಸಿದರು.

ಈ ವೇಳೆ ಮಾತನಾಡಿದ ಡಿಸಿಎಂ ಶಿವಕುಮಾರ್ ಅವರು, “ಯಾರು ಯಾವ ಯಾವ ಹೇಳಿಕೆ ನೀಡಿದ್ದಾರೆ ಎಂದು ನಾನು ನೋಡಿದ್ದೇನೆ. ಮುಖ್ಯಮಂತ್ರಿಯವರನ್ನು ಕೊಲೆಗಡುಕ ಎಂದು ಹೇಳಿರುವುದನ್ನೂ ನೋಡಿದ್ದೇನೆ. ನನ್ನ ಬಗ್ಗೆಯೂ ಮಾತನಾಡಿದ್ದಾರೆ. ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆ ಕೂಡ ಇಂದು ಬೆಳಗ್ಗೆ ಮಾತನಾಡಿದ್ದೂ, ಅದು ಕೂಡ ನನ್ನ ಮೊಬೈಲ್ ನಲ್ಲಿದೆ. ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವವರ ಹೆಸರನ್ನು ವಿಧಾನಸಭೆಯಲ್ಲಿ ಹೇಳಿ ಅವರನ್ನು ನಾಯಕರನ್ನಾಗಿ ಮಾಡುವುದು ಬೇಡ. ಈ ವಿಚಾರವಾಗಿ ಗೃಹ ಸಚಿವರು ಹೇಳುವುದನ್ನು ಕೇಳೋಣ” ಎಂದರು.

“ತಮ್ಮ ಮೇಲೆ ಕೊಲೆ ಆರೋಪ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಾದ ಶಿವಲಿಂಗೇಗೌಡ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ನಾನು ಸಿಎಂಗೆ ಈ ಬಗ್ಗೆ ವಿವರಿಸಿದೆ. ಅವರು ಬಳಸಿದ ಭಾಷೆ ಎಲ್ಲವನ್ನು ನೋಡಿದ್ದೇನೆ. ನಾನು ಗೃಹ ಸಚಿವನಲ್ಲದಿದ್ದರೂ ಅನೇಕರು ನನಗೆ ಈ ವಿಚಾರಗಳನ್ನು ಕಳುಹಿಸುತ್ತಿದ್ದಾರೆ. ಅದೇ ಸಭೆಯಲ್ಲಿ ಮುಖ್ಯಮಂತ್ರಿಗಳು ಗೃಹ ಸಚಿವರಿಗೆ ಯಾವ ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಈ ವಿಚಾರವನ್ನು ಈ ಸದನದಲ್ಲಿ ಚರ್ಚೆ ಮಾಡುವುದು ಬೇಡ. ಗೃಹ ಸಚಿವರು ಈ ವಿಚಾರ ನಿಭಾಯಿಸುತ್ತಾರೆ” ಎಂದರು.

Related Posts

Leave a Reply

Your email address will not be published. Required fields are marked *