-ಹೇಮಂತ್ ಗೌಡ, ಕನಕಪುರ
ಮಲೈ ಮಹದೇಶ್ವರ ಬೆಟ್ಟ—ಭಕ್ತಿಭಾವ, ತ್ಯಾಗ ಮತ್ತು ನಂಬಿಕೆಯ ಸಂಕೇತ. ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಈ ಪವಿತ್ರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಾರೆ. ಆದರೆ ಈ ಭಕ್ತಿಪೂರ್ಣ ಪಯಣದ ನಡುವೆ ಆಗಾಗ ಸಂಭವಿಸುವ ಅವಘಡಗಳು ಭಕ್ತರಲ್ಲಿ ಆತಂಕ ಮೂಡಿಸುತ್ತಿವೆ.
ಭಕ್ತರ ಸುರಕ್ಷತೆ ಕುರಿತ ಆತಂಕದ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಾದಯಾತ್ರೆಗೆ ಸಮಗ್ರ ರಕ್ಷಣಾ ವ್ಯವಸ್ಥೆ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಲಿಖಿತ ಆದೇಶ ನೀಡಿದ್ದಾರೆ.
ಫೆ.8ರಿಂದ 11ರವರೆಗೆ ಸಂಗಮ ಭಾಗದಲ್ಲಿ ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆ ಮಾಡುವಂತೆ ಹಾಗೂ ಪಾದಯಾತ್ರಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿ ಸಿಇಒಗೆ ಡಿಸಿಎಂ ಪತ್ರ ಬರೆದಿದ್ದಾರೆ.

ಕಾಡುಪ್ರಾಣಿಗಳಿಂದ ರಕ್ಷಣೆ, ಕುಡಿಯುವ ನೀರಿನ ವ್ಯವಸ್ಥೆ, ಮಾರ್ಗದ ನಿರಂತರ ನಿಗಾ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಅವಘಡಗಳು ಮರುಕಳಿಸಬಾರದು ಎಂಬ ಅವರ ಈ ಎಚ್ಚರಿಕೆ ಕ್ರಮ ಪಾದಯಾತ್ರೆಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತದೆ.
ಮೂರು ವರ್ಷಗಳ ಹಿಂದೆ ಕನಕಪುರ ತಾಲ್ಲೂಕಿನ ಸಂಗಮ ಬಳಿ ಕಾವೇರಿ ನದಿ ದಾಟುವ ವೇಳೆ ಭಕ್ತರು ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡ ದುರ್ಘಟನೆ ಇನ್ನೂ ಜನಮನದಿಂದ ಮಾಸಿಲ್ಲ. ಆ ನೋವಿನ ಸ್ಮರಣೆ ಮಾಸುವ ಮುನ್ನವೇ ಈಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಪಾದಯಾತ್ರೆಯಲ್ಲಿದ್ದ ಭಕ್ತನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ, ಕಾಲ್ನಡಿಗೆಯಲ್ಲಿ ಸಾಗುವ ಸಾವಿರಾರು ಭಕ್ತರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಲಕ್ಷಾಂತರ ಭಕ್ತರ ಪಯಣ, ಸವಾಲಿನ ಮಾರ್ಗ
ಫೆಬ್ರವರಿ ತಿಂಗಳಲ್ಲಿ ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ, ಫೆ.8ರಿಂದಲೇ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಮಹದೇಶ್ವರ ಬೆಟ್ಟದತ್ತ ಪಾದಯಾತ್ರೆಯಲ್ಲಿ ಸಾಗುತ್ತಾರೆ.
ಕನಕಪುರ ತಾಲೂಕಿನ ಏಳಗಹಳ್ಳಿಯಿಂದ ಆರಂಭವಾಗುವ ಈ ಪಯಣ, ಸಂಗಮದ ಬಳಿ ಕಾವೇರಿ ನದಿ ದಾಟಿ, ಬೊಮ್ಮಸಂದ್ರದ ಕಾಲ್ಕಡ ಮಾರ್ಗವಾಗಿ ಬೆಟ್ಟ ತಲುಪುತ್ತದೆ. ರಸ್ತೆ ಮಾರ್ಗವಾಗಿ ಹೋಗಬೇಕಾದರೆ 150 ಕಿಲೋಮೀಟರ್‌ಗಿಂತ ಹೆಚ್ಚು ದೂರ ಸುತ್ತಬೇಕಾಗುತ್ತದೆ. ಆದ್ದರಿಂದ ಅಪಾಯಗಳಿದ್ದರೂ ಭಕ್ತರ ಪರಂಪರೆ ಏಳಗಹಳ್ಳಿ–ಸಂಗಮ ಮಾರ್ಗವನ್ನೇ ಅವಲಂಬಿಸುತ್ತಾರೆ. ನದಿದಾಟ, ಅರಣ್ಯ ಪ್ರದೇಶ, ಕಾಡುಪ್ರಾಣಿಗಳ ಭೀತಿ—ಎಲ್ಲವನ್ನೂ ಮೀರಿ ಭಕ್ತರು ‘ಮಹದೇವ’ನ ನಾಮಸ್ಮರಣೆಯೊಂದಿಗೆ ಮುಂದೆ ಸಾಗುತ್ತಾರೆ.
ಈ ಪಾದಯಾತ್ರೆಯಲ್ಲಿ ಸ್ಥಳೀಯರ ಸೇವಾಭಾವ ಗಮನಾರ್ಹ. ಮಾರ್ಗ ಮಧ್ಯೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಭಕ್ತರಿಗೆ ಕುಡಿಯುವ ನೀರು, ಹಣ್ಣು, ಅನ್ನಸಂತರ್ಪಣೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುತ್ತಾರೆ. ಆದರೂ ಇದು ಸರ್ಕಾರದ ಹೊಣೆಗಾರಿಕೆಯನ್ನು ಮರೆಸುವಂತಾಗಬಾರದು.
ಮಹದೇಶ್ವರ ಬೆಟ್ಟದ ಪಾದಯಾತ್ರೆ ಕೇವಲ ಧಾರ್ಮಿಕ ಆಚರಣೆ ಅಲ್ಲ; ಇದು ಜನಜೀವನ, ಸಂಪ್ರದಾಯ ಮತ್ತು ನಂಬಿಕೆಯ ಭಾಗ. ಆದರೆ ಭಕ್ತಿಯ ಹೆಸರಿನಲ್ಲಿ ಜೀವದ ಅಪಾಯವನ್ನು ನಿರ್ಲಕ್ಷ್ಯ ಮಾಡಲಾಗದು. ತಾತ್ಕಾಲಿಕ ವ್ಯವಸ್ಥೆಗಳ ಬದಲಿಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರಗಳ ಅಗತ್ಯವಿದೆ—ಸುರಕ್ಷಿತ ನದಿದಾಟ ವ್ಯವಸ್ಥೆ, ಅರಣ್ಯ ಪ್ರದೇಶದಲ್ಲಿ ನಿರಂತರ ಗಸ್ತು, ವೈದ್ಯಕೀಯ ತುರ್ತು ಸೇವೆಗಳು ಮತ್ತು ಸ್ಪಷ್ಟ ಮಾರ್ಗಸೂಚಿಗಳು ಅನಿವಾರ್ಯ.
ಭಕ್ತರ ಶ್ರದ್ಧೆ ಉಳಿಯಬೇಕಾದರೆ, ಅವರ ಜೀವಕ್ಕೂ ಭದ್ರತೆ ಇರಬೇಕು. ಮಹಾಶಿವರಾತ್ರಿ ಪಾದಯಾತ್ರೆ ಭಕ್ತಿಭಾವದ ಹಬ್ಬವಾಗಬೇಕೇ ಹೊರತು, ದುರ್ಘಟನೆಗಳ ನೆನಪಿನ ದಿನವಾಗಬಾರದು. ಸರ್ಕಾರ, ಜಿಲ್ಲಾಡಳಿತ ಮತ್ತು ಸಮಾಜ ಈ ಮೂರೂ ಸೇರಿ ಕೈಜೋಡಿಸಿದಾಗ ಮಾತ್ರ ‘ಮಹದೇವನ ದಾರಿ’ ನಿಜಾರ್ಥದಲ್ಲಿ ಸುರಕ್ಷಿತವಾಗಲಿದೆ.


