ರಜಾ ಕೊಡಲಿಲ್ಲ ಎಂಬ ಕಾರಣಕ್ಕೆ ನಾಲ್ವರು ಸಹದ್ಯೋಗಿಗಳಿಗೆ ಸರ್ಕಾರಿ ನೌಕರ ಚಾಕು ಇರಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೋಲ್ಕತಾದ ನ್ಯೂ ಟೌನ್ ಪ್ರದೇಶದಲ್ಲಿರುವ ಕರಿಗಾರಿ ಭವನ್ ನಲ್ಲಿ ಟೆಕ್ನಿಕಲ್ ಎಜುಕೇಶನ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಕುಮಾರ್ ಸರ್ಕಾರ್ ಈ ಕೃತ್ಯ ಎಸಗಿದ್ದು, ರಕ್ತಸಿಕ್ತ ಕತ್ತಿಯನ್ನು ಹಿಡಿದು ನಡೆದು ಹೋಗುತ್ತಿರುವ ವೀಡಿಯೋ ವೈರಲ್ ಆಗಿದೆ.
ಬೆನ್ನಿಗೆ ಬ್ಯಾಗ್ ನೇತುಹಾಕಿಕೊಂಡು ಒಂದು ಕೈಯಲ್ಲಿ ಚಾಕು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಹೋಗುತ್ತಿದ್ದ ಅಮಿತ್ ಕುಮಾರ್ ನನ್ನು ಜನರು ಹಿಂಬಾಲಿಸಿ ವೀಡಿಯೋ ಮಾಡುತ್ತಿದ್ದರೆ, ಹತ್ತಿರ ಬರದಂತೆ ಚಾಕು ತೋರಿಸಿ ಹೆದರಿಸಿದ್ದಾನೆ.
ರಜೆ ವಿಷಯವಾಗಿ ಸಹದ್ಯೋಗಿಗಳ ಜೊತೆ ನಡೆಯುತ್ತಿದ್ದ ಮಾತುಕತೆ ವಿಕೋಪಕ್ಕೆ ತಿರುಗಿದೆ. ಮೇಲಾಧಿಕಾರಿಗಳು ರಜೆ ಕೊಡದ ಹಿನ್ನೆಲೆಯಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದು, ಇಬ್ಬರು ಸರ್ಕಾರಿ ನೌಕರರ ಸ್ಥಿತಿ ಗಂಭೀರವಾಗಿದೆ.
ಅಮಿತ್ ಕುಮಾರ್ ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ರಜೆ ಕೊಡದ ಕಾರಣ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ. ಆದರೆ ಅಧಿಕಾರಿಗಳು ರಜೆ ಏಕೆ ಕೊಟ್ಟಿಲ್ಲ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.