“ಅಕ್ರಮ ವಲಸೆಯ ವಿರುದ್ಧ ಭಾರತದ ಒಂದಾಗಬೇಕು” ಎಂದು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಕ್ರಮ ವಲಸಿಗರಿಂದ ಭಾರತೀಯ ನಾಗರಿಕರು ಎದುರಿಸುವ ಅಪಾಯಗಳನ್ನು ತಪ್ಪಿಸಲು, “ಡೆಮಾಗ್ರಾಫಿಕ್ ಮಿಷನ್” ಯೋಜನೆಯನ್ನು ಘೋಷಿಸಿದ್ದಾರೆ. ಅಕ್ರಮ ವಲಸೆಯ ವಿರುದ್ಧ ಭಾರತ ಪೂರ್ಣಪ್ರಮಾಣದ ಯುದ್ಧ ಆರಂಭಿಸಲಿದೆ ಎಂಬ ಸಂದೇಶ ರವಾನಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೊಸದಿಲ್ಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಿ, ದೇಶದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸುವ ಪಿತೂರಿಯ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು. “ಭಾರತ ಅಕ್ರಮ ವಲಸೆ ಮತ್ತು ಇದರಿಂದ ಭಾರತೀಯ ನಾಗರಿಕರಿಗೆ ಉಂಟಾಗುವ ಅಪಾಯವನ್ನು ಸಹಿಸುವುದಿಲ್ಲ. ಒಂದಾಗಿ ಹೋರಾಡುತೇವೆ ಎಂದು ಪ್ರಧಾನಿ ಹೇಳಿದರು.
ದೇಶದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲಾಗುತ್ತಿದೆ ಮತ್ತು ಹೊಸ ಬಿಕ್ಕಟ್ಟಿನ ಬೀಜಗಳನ್ನು ಬಿತ್ತಲಾಗುತ್ತಿದೆ. ನುಸುಳುಕೋರರು ದೇಶದ ಯುವಕರ ಜೀವನೋಪಾಯವನ್ನು ಕಸಿದುಕೊಳ್ಳುತ್ತಿದ್ದಾರೆ. ಅವರು ನಮ್ಮ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಆದಿವಾಸಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ ಎಂದು ಮೋದಿ ಅಕ್ರಮ ನುಸುಳುಕೋರರಿಗೆ ಎಚ್ಚರಿಕೆ ನೀಡಿದರು.
ದೇಶದಲ್ಲಿ ಭಾರತೀಯ ನಾಗರಿಕರ ಸೋಗಿನಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳನ್ನು, ವಿಶೇಷವಾಗಿ ಬಾಂಗ್ಲಾದೇಶದವರನ್ನು ಗುರುತಿಸಲು ಅಧಿಕಾರಿಗಳು ನಗರಾದ್ಯಂತ ಕಾರ್ಮಿಕರ ಗುರುತುಗಳನ್ನು ಪರಿಶೀಲಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅಕ್ರಮ ವಲಸೆ ಕುರಿತು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.