Menu

ನರೇಗಾ ಕೆಲಸಕ್ಕೆ ಆಗ್ರಹ: ತಾ.ಪಂ ಕಚೇರಿ ಮುತ್ತಿಗೆ ಹಾಕಿ ಕಾರ್ಮಿಕರ ಪ್ರತಿಭಟನೆ

​ಯಡ್ರಾಮಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ನೂರಾರು ಕಾರ್ಮಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯತ್ ಕಚೇರಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.

ಬುದುವಾರ ​ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಪಂಚಾಯತ್ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿಳಂಬ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ಉದ್ದೇಶಿಸಿ ದಾವುದ್ ಮುಜೇವಾರ್ ರೈತ ಸಂಘದ ತಾಲೂಕು ಕಾರ್ಯದರ್ಶಿ ಮಾತನಾಡಿ, ಕೂಲಿ ಕಾರ್ಮಿಕರು ನಿಯಮಾನುಸಾರ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದರೂ ಅಧಿಕಾರಿಗಳು ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಕೂಲಿಯನ್ನೇ ನಂಬಿದ ಬಡ ಕುಟುಂಬಗಳ ಜೀವನ ಕಷ್ಟಕರವಾಗಿದೆ. ಅಧಿಕಾರಿಗಳ ಈ ಉದಾಸೀನತೆ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

​ಪ್ರಮುಖ ಬೇಡಿಕೆಗಳು: ಯಲಗೋಡ ಮತ್ತು ಆಲೂರ ಗ್ರಾಮದ ಎಲ್ಲಾ ಅರ್ಹ ಕಾರ್ಮಿಕರಿಗೆ ಕೂಡಲೇ ನರೇಗಾ ಅಡಿಯಲ್ಲಿ ಕೆಲಸ ಒದಗಿಸಬೇಕು. ವಿವಿಧ ಗ್ರಾಮ ಪಂಚಾಯತಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಗಳನ್ನು ತಕ್ಷಣವೇ ಪುನರಾರಂಭಿಸಬೇಕು. ಕೂಲಿ ಪಾವತಿಯಲ್ಲಿ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಿ, ಸಮರ್ಪಕವಾಗಿ ಹಣ ಬಿಡುಗಡೆ ಮಾಡಬೇಕು ಎಂದರು.

ತಾಲೂಕು ಪಂಚಾಯತ್ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ, ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ಭರವಸೆ ನೀಡಿದರು. ಆದರೆ, ಒಂದು ವೇಳೆ ಕೂಡಲೇ ಎನ್.ಎಂ.ಆರ್ ಪ್ರಕ್ರಿಯೆ ಆರಂಭಿಸಿ ಕೆಲಸ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

​ಈ ಸಂದರ್ಭದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಸರಸ್ವತಿ ಕಾಸರಬೋಸಗಾ, ಗ್ರಾಮ ಘಟಕದ ಅಧ್ಯಕ್ಷ ಸಂಗನಗೌಡ ಮಾಲಿ ಪಾಟೀಲ್, ತಾಲೂಕು ಯುವ ಘಟಕದ ಅಧ್ಯಕ್ಷ ಧರ್ಮರಾಯ ಯಲಗೋಡ, ಸತೀಶ ಕುನೂರ, ಶೋಭಾ ಯಲಗೋಡ, ಸಾವಿತ್ರಿ ಯಲಗೋಡ ಸೇರಿದಂತೆ ನೂರಾರು ಕಾರ್ಮಿಕರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *