ನವದೆಹಲಿ: ದಶಕದ ನಿರಾಡಳಿತದ ವಿರುದ್ಧ ದಿಲ್ಲಿಯ ಮತದಾರ ನಿರ್ಣಾಯಕ ಮತ ಹಾಕಿಕ ಕಾರಣ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ. ಆದರೆ ಚುನಾವಣಾ ಅಖಾಡಾದಲ್ಲಿ ಅಂತಹ ವಾತಾವರಣ ಮೂಡಿಸುವಲ್ಲಿ ಆರ್‌ಎಸ್‌ಎಸ್ ನಡೆಸಿದ ಪಾತ್ರದ ಬಗ್ಗೆ ಹೊಸ ವಿಚಾರಗಳು ಬಯಲಾಗುತ್ತಿದೆ.
ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ ಮತದಾರರ ಮನವೊಲಿಸಲು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು.
ಈ ಪ್ರಯತ್ನಗಳು ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷಗಳ ತೀವ್ರ ಪೈಪೋಟಿಯ ಚುನಾವಣಾ ಪ್ರಚಾರದ ಮಧ್ಯೆ, ಆರ್‌ಎಸ್‌ಎಸ್ ಸ್ವಯಂಸೇವಕರು ಮೌನವಾಗಿಯೇ ಮತದಾರರ ಜಾಗೃತಿ ಅಭಿಯಾನವನ್ನು ನಡೆಸಿದರು.
ದೆಹಲಿಯಲ್ಲಿ ಸ್ವಚ್ಛತೆಯ ಕೊರತೆ, ಕುಡಿಯುವ ನೀರು ಸರಬರಾಜು, ಆರೋಗ್ಯ ಸೇವೆಗಳು, ವಾಯುಮಾಲಿನ್ಯ ಸಮಸ್ಯೆಗಳು ಮತ್ತು ಯಮುನಾ ನದಿಯನ್ನು ಶುಚಿಯಂತಹ ವಿಷಯಗಳ ಬಗ್ಗೆ ಚರ್ಚಿಸಲು ಆರ್‌ಎಸ್‌ಎಸ್ ದೆಹಲಿಯಾದ್ಯಂತ ಸಾವಿರಾರು ಸಭೆಗಳನ್ನು ನಡೆಸಿತ್ತು ಎಂದು ಹೇಳಲಾಗಿದೆ.
ಈ ಸಭೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ 10 ವರ್ಷಗಳ ಆಡಳಿತದಲ್ಲಿ ಮಾಡಿದ ಭ್ರಷ್ಟಾಚಾರ ಮತ್ತು ಹಲವಾರು ಭರವಸೆಗಳನ್ನು ಈಡೇರಿಸದಿರುವ ವಿಷಯವನ್ನು ಎತ್ತಿ ತೋರಿಸಲಾಗಿತ್ತು.
ಆ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಮಾಡೆಲ್ ಆಡಳಿತದ ಬಗೆಗಿನ ಭ್ರಮೆಯನ್ನು ಕಳಚಲು ಪ್ರಯತ್ನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸಭೆಗಳಲ್ಲಿ ದೆಹಲಿಯಲ್ಲಿನ ಅಕ್ರಮ ವಲಸಿಗರ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ. ದ್ವಾರಕಾ ಪ್ರದೇಶ ಒಂದರಲ್ಲೇ ಕನಿಷ್ಠ ೫೦೦ ಸಣ್ಣ ಗುಂಪು ಸಭೆಗಳು ನಡೆದವು ಎಂದು ಆರ್‌ಎಸ್‌ಎಸ್ ಮೂಲಗಳು ಪಿಟಿಐಗೆ ತಿಳಿಸಿವೆ.
ಮೂಲಗಳ ಪ್ರಕಾರ, ಆರ್‌ಎಸ್‌ಎಸ್ ಸ್ವಯಂಸೇವಕರು ಚುನಾವಣೆಗೆ ಒಂದು ತಿಂಗಳು ಮುಂಚಿತವಾಗಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದರು. ಎಎಪಿಗೆ ಸಾಕಷ್ಟು ಬೆಂಬಲವಿರುವ ಕೊಳೆಗೇರಿಗಳು ಮತ್ತು ಅನಧಿಕೃತ ಕಾಲೊನಿಗಳಲ್ಲಿ ಸಹ ಸಣ್ಣ ಗುಂಪು ಸಭೆಗಳನ್ನು ನಡೆಸಲಾಯಿತು ಎಂದು ತಿಳಿದು ಬಂದಿದೆ.
ಜಾಗೃತಿ ಮೂಡಿಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಈ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಸೈದ್ಧಾಂತಿಕ ಅಡಿಪಾಯದ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಮತದಾರರನ್ನು ತಲುಪುವ ವಿನೂತನ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ.
ಆದಾಗ್ಯೂ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಪ್ರದರ್ಶನದ ನಂತರ, ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿ ಭರ್ಜರಿ ವಿಜಯದೊಂದಿಗೆ ಅಧಿಕಾರವನ್ನು ಉಳಿಸಿಕೊಂಡ ಎರಡು ರಾಜ್ಯಗಳಾದ ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಹೊಸ ಉತ್ಸಾಹದಿಂದ ಇಂತಹ ಅಭಿಯಾನಗಳನ್ನು ಪ್ರಾರಂಭಿಸಿದೆ.