Menu

ಬಾಂಬ್‌ ಬೆದರಿಕೆ ಆರೋಪಿಯನ್ನು ಮೈಸೂರಲ್ಲಿ ಬಂಧಿಸಿದ ದೆಹಲಿ ಪೊಲೀಸ್‌

ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ.

ಮೈಸೂರು ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಬಂಧಿತ ಆರೋಪಿ. ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಹಾಕಿ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದ್ದ ಎನ್ನಲಾಗಿದೆ.

ಮೈಸೂರಿನ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಆರೋಪಿ ವಾಸವಿದ್ದ, ಮಾಹಿತಿ ಪಡೆದ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಸ್ಥಳೀಯ ವಿವಿ ಪುರಂ ಪೊಲೀಸ್ ಠಾಣೆಯ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಮನೆಯಲ್ಲಿ ಹಲವು ಸಿಮ್ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಆತ ಕಳುಹಿಸಿದ ಎಲ್ಲಾ ಬೆದರಿಕೆ ಸಂದೇಶಗಳ ಹಿನ್ನಲೆ ಹಾಗೂ ಉದ್ದೇಶಗಳ ಬಗ್ಗೆ ವಿಚಾರಣೆ ಮುಂದುವರಿಯಲಿದೆ.

ಮಾನಸಿಕ ಕಿರುಕುಳ ಆರೋಪ: ಮಹಿಳೆ ಸುಸೈಡ್‌

ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಷಾ (45) ಆತ್ಮಹತ್ಯೆ ಮಾಡಿಕೊಂಡವರು. ಸಂಘದ ಹೊಸ ಕಮಿಟಿಯವರು 2020ರ ಲೆಕ್ಕಾಚಾರ ಕೇಳಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ ನೋಟ್‌ ನಲ್ಲಿ ಆರೋಪಿಸಿದ್ದಾರೆ.

2010ರಿಂದ ಉಷಾ ಹಾಲು ಉತ್ಪಾದಕರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದರು. ಹಾಲು ಉತ್ಪಾದಕರ ಸಂಘದಲ್ಲಿ ಹೊಸ ಕಮಿಟಿ ಬಂದ ಮೇಲೆ ಹಳೆಯ ಲೆಕ್ಕ ದಾಖಲೆ ಕೇಳುತ್ತಿದ್ದರು. ಸಂಘದ ಹಣ ದುರುಪಯೋಗ ಮಾಡಿದ್ದಾರೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 2020ರ ಕೆಲಸಕ್ಕೆ ಈಗ ಬಿಲ್ ಕೇಳ್ತಾರೆ, ಎಲ್ಲಿಂದ ತರೋದು, ದಂಡ ಕಟ್ಟಿ ಎಂದಿದ್ದರೆ ಕಟ್ಟುತ್ತಿದ್ದೆ. ಆದರೆ ಕೋರ್ಟು, ಪೊಲೀಸ್ ಎಂದು ಹೆದರಿಸಿದ್ದೀರಿ. ನೀವು ಒಂದು ಅವಕಾಶ ನೀಡಿದ್ದರೆ, ನಮ್ಮ ಮಗಳುತಬ್ಬಲಿ ಆಗ್ತಿರಲಿಲ್ಲ ಎಂದು ಡೆತ್ ನೋಟ್‍ನಲ್ಲಿ ಬರೆಯಲಾಗಿದೆ.

ಮಗಳ ಓದು-ಭವಿಷ್ಯ, ಮನೆ, ಒಡವೆಗಳ ಬಗ್ಗೆಯೂ ಡೆತ್ ನೋಟ್‍ನಲ್ಲಿ ಬರೆದಿದ್ದಾರೆ. ಊರೇ ಒಂದಾಗಿ ಅವಮಾನ ಮಾಡ್ತಿದ್ದೀರಿ. ಊರಿನ ಯುವಕರ ಚುಚ್ಚು ಮಾತಿನಿಂದ ಮನಸ್ಸಿಗೆ ಘಾಸಿಯಾಗಿದೆ. ಬಸವಣ್ಣ  ಕ್ಷಮಿಸಪ್ಪಾ ಎಂದು ಬರೆದಿದ್ದಾರೆ.

Related Posts

Leave a Reply

Your email address will not be published. Required fields are marked *