Menu

ಬೆಂಗಳೂರಿಗೆ ದೆಹಲಿ ಮಾದರಿ ಅತ್ಯಾಧುನಿಕ ತಂತ್ರಜ್ಞಾನದ ಕಸ ವಿಲೇವಾರಿ ಕೇಂದ್ರ: ಡಿಸಿಎಂ ಡಿಕೆ ಶಿವಕುಮಾರ್

dk shivakumar

ನವದೆಹಲಿ: ದೆಹಲಿ ಕಸ ವಿಲೇವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಈ ಮಾದರಿ ಅಳವಡಿಸುವ ಬಗ್ಗೆ ಸಹೋದ್ಯೋಗಿಗಳ ಜತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು.

ನವದೆಹಲಿ ಮುನಿಸಿಪಲ್ ಕಾರ್ಪೋರೇಷನ್ ನ (MCD) ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೋಮವಾರ ಭೇಟಿ ನೀಡಿದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ನಾನು ಇದುವರೆಗೂ ಪರಿಶೀಲನೆ ಮಾಡಿರುವ ಕಸ ವಿಲೇವಾರಿ ಕೇಂದ್ರಗಳ ಪೈಕಿ ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಅತಿ ಕಡಿಮೆ ಪ್ರದೇಶದಲ್ಲಿ ಅತ್ಯುತ್ತಮವಾಗಿ ಕಸ ವಿಲೇವಾರಿ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಈ ಹಿಂದೆ ಪ್ರಯೋಗಿಸಿದ್ದ 10ರಿಂದ 15 ಮೆ.ವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರಗಳು ವಿಫಲವಾಗಿದ್ದವು. ಆದರೆ ಇಲ್ಲಿ 25 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

ಇಂತಹ ಅತ್ಯುತ್ತಮ ಕೇಂದ್ರವನ್ನು ಅಳವಡಿಸಿರುವ ಜಿಂದಾಲ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ ಅನಿಲ ಉತ್ಪಾದನೆಯನ್ನೂ ಮಾಡಲಾಗುತ್ತಿದೆ. ನಾನು ಈ ವಿಚಾರವಾಗಿ ಬೆಂಗಳೂರಿನಲ್ಲಿ ನಮ್ಮ ಸಹೋದ್ಯೋಗಿಗಳ ಜತೆ ಚರ್ಚೆ ಮಾಡುತ್ತೇನೆ. ಇಂದು ಈ ಕೇಂದ್ರಕ್ಕೆ ಭೇಟಿ ನೀಡಿರುವುದು ನನಗೆ ಒಂದು ಕಲಿಕಾ ಅನುಭವವನ್ನು ಕೊಟ್ಟಿದೆ ಎಂದು ತಿಳಿಸಿದರು.

“ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಿದ್ದು, ಎರಡು ಕಡೆ ಟೆಂಡರ್ ಕರೆಯಲಾಗಿದೆ. ದೆಹಲಿಯಲ್ಲಿ ಹೊಸ ತಂತ್ರಜ್ಞಾನ ಪರಿಶೀಲನೆ ಮಾಡಲಾಗಿದೆ. ಚೆನ್ನೈನಲ್ಲಿ ಅನಿಲ ಉತ್ಪಾದನೆ, ಹೈದರಾಬಾದ್ ನಲ್ಲಿ ಅನಿಲ ಹಾಗೂ ವಿದ್ಯುತ್ ಎರಡನ್ನೂ ಉತ್ಪಾದನೆ ಮಾಡಲಾಗುತ್ತಿದೆ. ದೆಹಲಿಯ ಎನ್ ಸಿಆರ್ ನಲ್ಲಿರುವ ಈ ಕೇಂದ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ” ಎಂದರು.

“ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಡುವ ಜಾಗದ ಅಕ್ಕಪಕ್ಕದ ಪ್ರದೇಶದವರು ಕಸ ವಿಲೇವಾರಿಯಿಂದ ದುರ್ವಾಸನೆ ಬರುತ್ತದೆ ಎಂದು ವಿರೋಧಿಸುತ್ತಾರೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಈ ಸಮಸ್ಯೆ ಎದುರಾಗುತ್ತಿದೆ. ದೆಹಲಿಯಲ್ಲಿ ದುರ್ವಾಸನೆರಹಿತವಾಗಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ದೆಹಲಿಯಲ್ಲಿನ ಮಾದರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ್ದೇವೆ. ರಸ್ತೆ ವಿಚಾರವಾಗಿ ದೆಹಲಿಯಲ್ಲಿ ಪ್ರತ್ಯೇಕ ನೀತಿ ರೂಪಿಸಿದ್ದು, ಇದರ ಪರಿಶೀಲನೆ ಮಾಡಲಾಗುವುದು” ಎಂದು ಹೇಳಿದರು.

ಹೈಕಮಾಡ್ ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ಈ ಬಾರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಕಷ್ಟವಾಗಲಿದೆ. ನಾಳೆ ಎತ್ತಿನಹೊಳೆ ಯೋಜನೆ ಸಂಬಂಧ ಸಿಎಂ ಸಭೆ ಕರೆದಿದ್ದು, ನಾನು ಈ ಸಭೆಯಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ” ಎಂದು ತಿಳಿಸಿದರು.

ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ದು ಯಾರು ಎಂದು ಕೇಳಿದಾಗ, “ಅವರಿಗೆ ಆಹ್ವಾನ ಕೊಟ್ಟಿದ್ದು ಯಾರು ಎಂಬುದನ್ನು ರಾಜ್ಯಪಾಲರನ್ನೇ ಕೇಳಿ. ಕಾಲ್ತುಳಿತ ಪ್ರಕರಣದ ಬಗ್ಗೆ ಕುನ್ಹಾ ಅವರ ಆಯೋಗ ತನಿಖೆ ಮಾಡುತ್ತಿದ್ದು, ಅವರ ತನಿಖೆ ಮೇಲೆ ಪ್ರಭಾವ ಬೀರಬಾರದು. ಹೀಗಾಗಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *