ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿಯ ನೂತನ ಸಿಎಂ ಫೆಬ್ರವರಿ 20 ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದ್ದಾರೆ. ಆದರೆ ಯಾರು ಸಿಎಂ ಆಗುತ್ತಾರೆ? ಎಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತದೆ ಎಂಬ ಗುಟ್ಟು ಬಿಟ್ಟುಕೊಟ್ಟದೇ ಗೌಪ್ಯತೆ ಕಾಯ್ದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ ದೆಹಲಿ ಚುನಾವಣೆಯಲ್ಲಿ 48 ಸ್ಥಾನ ಗೆದ್ದು ಪೂರ್ಣ ಬಹುತಮದೊಂದಿಗೆ ಜಯಭೇರಿ ಬಾರಿಸಿದ ಬಿಜೆಪಿ ಸುಮಾರು 3 ದಶಕಗಳ ನಂತರ ದೆಹಲಿಯಲ್ಲಿ ಗದ್ದುಗೆ ಹಿಡಿದಿದೆ. ಆದರೆ ಫಲಿತಾಂಶ ಬಂದು ಹಲವು ದಿನಗಳೇ ಕಳೆದರೂ ಸಿಎಂ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗಿಲ್ಲ.
ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸ ಮುಗಿಸಿ ಸ್ವದೇಶಕ್ಕೆ ಮರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಮೂವರು ಸಭೆ ಸೇರಿದ ನಂತರ ಸಿಎಂ ಯಾರು ಎಂಬುದನ್ನು ಅಂತಿಮಗೊಳಿಸಲಿದ್ದಾರೆ.
ಸೋಮವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಸಭೆಯಲ್ಲಿ ಸಿಎಂ ಆಯ್ಕೆಯನ್ನು ಹೈಕಮಾಂಡ್ ಗೆ ಬಿಡಲಾಗಿದೆ. ಇದರಿಂದ ಫೆಬ್ರವರಿ 18ರಂದು ದೆಹಲಿ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ಎರಡು ದಿನ ಮುಂದೂಡಿಕೆ ಆಗಿದೆ.
ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎಲ್ಲಿ ನಡೆಯುತ್ತದೆ ಎಂಬ ಬಗ್ಗೆಯೂ ಮಾಹಿತಿ ಗೌಪ್ಯವಾಗಿಡಲಾಗಿದೆ. ಮೂಲಗಳ ಪ್ರಕಾರ ಜವಹರಲಾಲ್ ನೆಹರೂ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಿಜೆಪಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ 15 ಮುಖಂಡರ ಹೆಸರು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.