ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಬಂಧಿಸಿ ಕರೆದೊಯ್ದ ಎರಡು ದಿನಗಳ ಬಳಿಕ ಮಡುರೋ ಆಡಳಿತದಲ್ಲಿ ಉಪಾಧ್ಯಕ್ಷೆಯಾಗಿದ್ದ ಡೆಲ್ಸಿ ರೋಡ್ರಿಗಸ್ ದೇಶದ ಹಂಗಾಮಿ ಅಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಮ್ಮ ತಾಯ್ನಾಡಿನ ಮೇಲೆ ಕಾನೂನುಬಾಹಿರ ಸೇನಾ ದಾಳಿಯ ನಂತರ ಇಲ್ಲಿನ ಜನರಿಗೆ ಉಂಟಾದ ನೋವಿಗಾಗಿ ನಾನು ದುಃಖದಿಂದ ಬರುತ್ತಿದ್ದೇನೆ. ಮಡುರೋ ದಂಪತಿಯ ಅಪಹರಣ, ಬಂಧನದ ನೋವಿನಲ್ಲೇ ಆಗಮಿಸಿದ್ದೇನೆ ಎಂದು ಹೇಳಿದರು.
ಮಡುರೋ ಅವರಂತೆಯೇ ಪ್ರಸ್ತುತ ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ಪಟ್ಟಕ್ಕೇರಿರುವ ಡೆಲ್ಸಿ ರೋಡ್ರಿಗಸ್ ಕೂಡ ಪುಟ್ಟಪರ್ತಿಯ ಸತ್ಯಸಾಯಿ ಬಾಬಾರ ಪರಮಭಕ್ತೆ. ಅವರು ಇತ್ತೀಚೆಗೆ ಎರಡು ಬಾರಿ ಪುಟ್ಟಪರ್ತಿಗೆ ಬಂದು ಆಶೀರ್ವಾದ ಪಡೆದಿದ್ದರು ಎನ್ನಲಾಗಿದೆ.
ವೆನಿಜುವೆಲಾ ವಿರುಧ ಅಮೆರಿಕ ಶನಿವಾರ ಡ್ರಗ್ಸ್ ಭಯೋತ್ಪಾದನೆ ಆರೋಪ ಹೊರಿಸಿ ದಾಳಿ ನಡೆಸಿದೆ. ವಿಮಾನ, ಕಾಪ್ಟರ್ ಹಾಗೂ ಭೂಸೇನೆಯನ್ನು ಬಳಸಿ ರಾಜಧಾನಿ ಕಾರಕಸ್ ಮೇಲೆ ದಾಳಿ ನಡೆಸಿರುವ ಅಮೆರಿಕ ಸೇನೆ, ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಪಹರಿಸಿ ಹಡಗು ಮೂಲಕ ಅಮೆರಿಕಕ್ಕೆ ಕರೆದೊಯ್ದಿದೆ.
ಈ ಬೆಳವಣಿಗೆ ದಕ್ಷಿಣ ಅಮೆರಿಕಾದ ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಹುಟ್ಟುಹಾಕಿದೆ. ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಕ್ರಮವನ್ನು ರಷ್ಯಾ ಮತ್ತು ಚೀನಾ ಸೇರಿದಂತೆ ಅನೇಕ ಪ್ರಮುಖ ರಾಷ್ಟ್ರಗಳು ಖಂಡಿಸಿವೆ.


