ಬೆಂಗಳೂರು ನನ್ನ ಹೃದಯ ಮತ್ತು ಆತ್ಮವಾಗಿದೆ. ಬೆಂಗಳೂರಿಗೆ ಪ್ರಶಸ್ತಿ ತಂದುಕೊಟ್ಟಿದ್ದು ಬೆಂಗಳೂರಿಗೆ ಅರ್ಪಿಸುತ್ತೇನೆ ಎಂದು ಆರ್ ಸಿಬಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಫೈನಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ 18 ವರ್ಷಗಳ ನಂತರ ಐಪಿಎಲ್ ಚಾಂಪಿಯನ್ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಅವರು ಹಂಚಿಕೊಂಡರು.
18 ವರ್ಷಗಳ ಕಾಲ ನಮ್ಮ ಜೊತೆಗಿದ್ದ ಆರ್ ಸಿಬಿ ಅಭಿಮಾನಿಗಳಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ. ಇದು ನನ್ನ ಜೀವನದ ಮರೆಯಲಾಗದ ಕ್ಷಣ ಎಂದು ಅವರು ನುಡಿದರು.
ನನ್ನ ವೃತ್ತಿ ಜೀವನದಲ್ಲಿ ಇದೊಂದು ಪ್ರಶಸ್ತಿ ಬೇಕಾಗಿತ್ತು. ಕಳೆದ 18 ವರ್ಷಗಳಿಂದ ಪ್ರತಿ ವರ್ಷ ಪ್ರಶಸ್ತಿ ಗೆಲ್ಲಬೇಕು ಎಂಬ ಗುರಿಯಿಂದಲೇ ಬರುತ್ತಿದ್ದಾರೆ. ಆದರೆ 18 ವರ್ಷಗಳ ಕಾಯುವಿಕೆ ನಂತರ ಈ ಬಾರಿ ಬಂದಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ಪ್ರಶಸ್ತಿ ಕೈ ತಪ್ಪುತ್ತಿತ್ತು. ಆದರೆ ಆರ್ ಸಿಬಿ ಅಭಿಮಾನಿಗಳು, ಆಡಳಿಯ ಮಂಡಳಿ ಬೆಂಬಲ ನೀಡಿದರು. ಈ ಬಾರಿ ಹರಾಜಿನಲ್ಲಿ ಆಟಗಾರರ ಆಯ್ಕೆ ಬಗ್ಗೆ ಸಾಕಷ್ಟು ಟೀಕೆ ಬಂದಿತ್ತು. ಆದರೆ ಈ ಬಾರಿ ಎಲ್ಲಾದಕ್ಕೂ ಉತ್ತರ ಸಿಕ್ಕಿದೆ ಎಂದು ಅವರು ನುಡಿದರು.
ಆರ್ ಸಿಬಿ ಮತ್ತು ನನ್ನ ನಡುವಿನ ಬಾಂಧವ್ಯ ಚೆನ್ನಾಗಿದೆ. ಮ್ಯಾನೇಜ್ ಮೆಂಟ್, ಕೋಚ್, ಸಹಾಯಕ ಸಿಬ್ಬಂದಿ ಪ್ರತಿಯೊಬ್ಬರು ಸಾಕಷ್ಟು ಕಷ್ಟ ಪಟ್ಡಿದ್ದಾರೆ ಎಂದು ಕೊಹ್ಲಿ ನುಡಿದರು.