Menu

ಸರ್ಕಾರಿ ಶಾಲೆಗಳ ಅವಸಾನ: ಪುನಶ್ಚೇತನಕ್ಕೆ ಸರ್ಕಾರದ ಕ್ರಮ ಏನು

ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಯಾದಗಿರಿ, ಬೀದರ್, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಹುತೇಕ ಕಡೆ ಸರ್ಕಾರಿ ಶಾಲೆಗಳು ಅವಸಾನದ ಘಟ್ಟದಲ್ಲಿವೆ. ಇವುಗಳ ದುರಸ್ತಿ ಮತ್ತು ಪುನಶ್ಚೇತನಕ್ಕೆ ಸರ್ಕಾರವೀಗ ಮೀನ- ಮೇಷ ಎಣೆಸುವುದು ಸರಿಯೇ?

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮಾದರಿ ಶಿಕ್ಚಣದ ಬಗ್ಗೆ ಸಚಿವ ಮಧು ಬಂಗಾರಪ್ಪ ಈ ಹಿಂದೆ ಹೇಳಿದ್ದುಂಟು. ಇಂಗ್ಲಿಷ್ ನಮೂನೆಯ ಶಿಕ್ಷಣ ಒಳ್ಳೆಯದೇ. ಆದರೆ ಇಂತಹ ಮಾದರಿ ಶಿಕ್ಷಣವನ್ನು ಸರ್ಕಾರ ಅಳವಡಿಸುವ ಮುನ್ನ, ಪ್ರಮುಖವಾಗಿ ಆಲೋಚಿಸಿ ತೀರ್ಮಾನ ಕೈಗೊಳ್ಳು ತುರ್ತು ಸಂಗತಿಗಳೂ ಇವೆ.

ಉತ್ತರ ಕರ್ನಾಟಕವೂ ಸೇರಿದಂತೆ ನಾಡಿನ ಗಡಿಭಾಗದ ಜಿಲ್ಲೆಗಳಲ್ಲಿ ಸರ್ಕಾರಿ ಕನ್ನಡದ ಶಾಲಾ ಕಟ್ಟಡಗಳ ಸ್ಥಿತಿ ಅತಿಶೋಚನೀಯವಾಗಿವೆ ! ಕೆಲವೊಂದು ಗ್ರಾಮಗಳಿಗೆ ಇನ್ನೂ ಶಾಲಾ ಭಾಗ್ಯವೇ ಲಭಿಸಿಲ್ಲ ! ಇನ್ನು ಕೆಲವು ಕಡೆ ಶಾಲಾ ಕಟ್ಟಡವಿದ್ದರೆ, ಅವುಗಳಿಗೆ ಸರಿಯಾದ ಕಿಟಕಿ ಮತು ಬಾಗಿಲು ಇಲ್ಲ. ಇವೆಲ್ಲವೂ ಇದ್ದರೆ ಅಲ್ಲಿ ಪಾಠ ಮಾಡುವ ಶಿಕ್ಷಕನಿಗೆ ಕೊರತೆ . ಮತ್ತೆ ಕೆಲವು ಕಡೆ ಸರ್ಕಾರಿ ಶಾಲೆಗಳು ಅಕ್ರಮ ಚಟುವಟಿಕೆಗಳ ಗೂಡು. ಹೀಗೆ ಹಲವು ಹತ್ತು ಅವಲಕ್ಷಣಗಳಿಂದು ಸರ್ಕಾರಿ ಶಾಲೆಗಳ ಪಾಲಿಗೆ ಬಹುದೊಡ್ಡ ಶಾಪವಾಗಿ ಪರಿಣಮಿಸಿದೆ. ಇವುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಕಾರ್ಯೋನ್ಮುಖವಾಗಲು ಇದುವೇ ಸಕಾಲ.

ಶಿಕ್ಷಣ ಇಲಾಖೆಗೆ ಬಾಯಾರಿಕೆ ಆದಾಗ ಬಾವಿ ತೋಡುವ ಪ್ರವೃತ್ತಿ ಸಲ್ಲದು. ಈಗಿನ್ನೂ ಬೇಸಿಗೆಯ ರಜೆ. ಮೇಲೆ ಹೇಳಿದ ಎಲ್ಲ ಸಮಸ್ಯೆಗಳನ್ನು ಸರಿಪಡಿಸಲು ಏಪ್ರಿಲ್, ಮೇ ತಿಂಗಳೇ ಸರ್ವಸೂಕ್ತ. ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಯಾದಗಿರಿ, ಬೀದರ್, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಬಹುತೇಕ ಕಡೆ ಸರ್ಕಾರಿ ಶಾಲೆಗಳು ಅವಸಾನದ ಘಟ್ಟದಲ್ಲಿವೆ. ಇವುಗಳ ದುರಸ್ತಿ ಮತ್ತು ಪುನಶ್ಚೇತನಕ್ಕೆ ಸರ್ಕಾರ ಮೀನಾ ಮೇಷ ಎಣೆಸುವುದು ಸಲ್ಲದು. ಇಂತಹ ಶಾಲೆಗಳ ದುರಸ್ತಿ ಕುರಿತು ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೀಡಿರುವ ಹತ್ತಾರು ತಜ್ಞರ ವರದಿಗಳು ವಿಧಾನಸೌಧದ ಮೂರನೆ ಮಹಡಿಯಲ್ಲಿ ಧೂಳು ತಿನ್ನುತ್ತಿವೆ. ಯಾದಗಿರಿ ಮೊದಲಾದ ಜಿಲ್ಲೆಗಳು ಯಾಕಿಂದು ಪಬ್ಲಿಕ್ ಪರೀಕ್ಷೆಗಳಲ್ಲಿ ಹಿಂದುಳಿದಿವೆ ಎಂಬುದನ್ನು ಸರ್ಕಾರ ಗಂಭೀರವಾಗಿ ತಿಳಿಯಬೇಕಿದೆ. ಕುಗ್ರಾಮಗಳಲ್ಲಿ ವಾಸವಾಗಿರುವ ಬಡ ಮಕ್ಕಳ ಶಿಕ್ಷಣ ಹಕ್ಕುಗಳನ್ನು ಸರ್ಕಾರವೇ ಇಂದು ಕಸಿದುಕೊಂಡಿರುವುದು ದುರ್ದೈವ. ಇವರೆಲ್ಲರೂ ಪಟ್ಟಣಗಳಿಗೆ ಬಂದು ಅಕ್ಷರ ಕಲಿಯಲು ಸಾಧ್ಯವೇ ?

ರಾಜ್ಯದಲ್ಲಿ ಇನ್ನೂ ಸರ್ಕಾರಿ ಶಾಲೆಯನ್ನೇ ನೋಡದ ಕೆಲ ಕುಗ್ರಾಮಗಳಿವೆ. ಇಂತಹ ಗಂಭೀರ ಸಂಗತಿಗಳನ್ನು ಶಿಕ್ಷಣ ಸಚಿವರು ಕೂಡಲೇ ಸ್ಪಂದಿಸುವುದು ಅಗತ್ಯ. ಪ್ರಾಥಮಿಕ ಶಿಕ್ಚಣಕ್ಕೆ ಸಕಾರ ಭದ್ರ ಬುನಾದಿ ಮುಖ್ಯ . ಈ ದಿಶೆಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುವುದೂ ಅಗತ್ಯ. ಸರ್ಕಾರಗಳಿಂದು ಪ್ರಾಥಮಿಕ ಶಿಕ್ಷಣದ ಬೇಕು- ಬೇಡಗಳಿಗೆ ಹೆಚ್ಚಿನ ಅನುದಾನವನ್ನು ನಿಗದಿಪಡಿಸಬೇಕಿದೆ. ಕೃಷಿ, ನೀರಾವರಿ, ಆರೋಗ್ಯ ಮತ್ತು ವಸತಿ ವಲಯಗಳಿಗೆ ಬಜೆಟ್‌ನಲ್ಲಿ ಮೊದಲ ಆದ್ಯತೆ ಇದೆ. ಆದರೆ ಭಾವಿ ಭಾರತದ ಪ್ರಜೆಗಳನ್ನು ನಿರ್ಮಿಸುವ ಶಿಕ್ಷಕ ಮತ್ತು ಶಾಲೆಗೆ ಸಂಬಂಧಿಸಿದ ಇಲಾಖೆಗೆ ಏಕೆ ಸೂಕ್ತ ಅನುದಾನವಿಲ್ಲ ? ಒಟ್ಟಿನಲ್ಲಿ ಮೂಲಭೂತ ಸೌಕರ್‍ಯದ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಲೆಕೆಡಿಸಿಕೊಳ್ಳದೆ ಈ ಕ್ಷೇತ್ರದ ಪ್ರಗತಿ ಮತ್ತು ಸುಧಾರಣೆಯೂ ಅಸಾಧ್ಯ .

Related Posts

Leave a Reply

Your email address will not be published. Required fields are marked *