ಬೆಂಗಳೂರು: ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ, ಹೇಗೆ ಮುಂದುವರೆಯಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನು ದೆಹಲಿಗೆ ಹೋದ ಮೇಲೆ ಮಾತುಕತೆ ನಡೆಯಲಿದೆ. ಪ್ರಮುಖ ಮೂರ್ನಾಲ್ಕು ಜನರನ್ನು ಕರೆಸಿ ಮಾತನಾಡುತ್ತೇನೆ. ಹೇಗೆ ಮುಂದುವರೆಯಬೇಕೆಂದು ತೀರ್ಮಾನ ಮಾಡ್ತೇನೆ. ಸಿಎಂ, ಡಿಸಿಎಂ ಅವರೆಲ್ಲರನ್ನು ಕರೆಸಿಯೇ ಮಾತನಾಡ್ತೇನೆ. ಎಲ್ಲವನ್ನೂ ಬಗೆಹರಿಸುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ದೆಹಲಿಗೆ ತೆರಳುವ ಹಿನ್ನೆಲೆಯಲ್ಲಿ, ಖರ್ಗೆ ನಿವಾಸಕ್ಕೆ ಹಲವು ನಾಯಕರ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಡಿ. ಸುಧಾಕರ್ ಹಾಗೂ ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿ ಚರ್ಚೆ ನಡೆಸಿದರು. ಕೆಲವರು ಸಂಪುಟ ಸೇರ್ಪಡೆ ಸಂಬಂಧ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.


