ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಯೆಮೆನ್‌ನಲ್ಲಿ ನಾಳೆ (ಜು.16)ನಿಗದಿಯಾಗಿದ್ದ ಮರಣದಂಡನೆ ಜಾರಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ಮಾತುಕತೆವರೆಗೂ ನಿಮಿಷಾ ಪ್ರಿಯಾ ಜೀವಂತವಾಗಿ ಇರುತ್ತಾಳೆ ಎಂದು ಕುಟುಂಬ ನಿಟ್ಟುಸಿರು ಬಿಟ್ಟಿದೆ.
ಯೆಮೆನ್ ಪ್ರಜೆಯನ್ನು ಕೊಲೆ ಮಾಡಿದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಪ್ರಕರಣ ಭಾರತಕ್ಕೆ ಸವಾಲಾಗಿದೆ. ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಲ್ಲಿರದ ವಿಶೇಷ ರಾಜತಾಂತ್ರಿಕ ವ್ಯವಸ್ಥೆ ಹಾಗೂ ವಿಭಿನ್ನ ನ್ಯಾಯಾಲಯ ವ್ಯವಸ್ಥೆ ಯೆಮೆನ್ ದೇಶದಲ್ಲಿರುವುದೇ ಇದಕ್ಕೆ ಕಾರಣ.
ಪ್ರಕರಣ ಸಂಬಂಧ ವಿಚಾರಣೆ ಮಾಡಿದ್ದ ಭಾರತದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜು.18ರ ಶುಕ್ರವಾರಕ್ಕೆ ಮುಂದೂಡಿದೆ. ನಾಳೆ ಗಲ್ಲು ಶಿಕ್ಷೆ ಜಾರಿ ಆಗಬೇಕಿತ್ತಾದರೂ ಯೆಮೆನ್ ಮುಂದೂಡಿದೆ. ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಹೆಚ್ಚಿನ ಅಧಿಕಾರ ಇಲ್ಲ. ಆಕೆಯ ಉಳಿವಿಗೆ ಸಾಧ್ಯವಾದ ಎಲ್ಲ ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ. ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ಬ್ಲಡ್ ಮನಿ ನೀಡುವುದೊಂದೇ ಸದ್ಯಕ್ಕೆ ಆಕೆಯನ್ನು ಉಳಿಸಬಲ್ಲ ದಾರಿ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಹಿರಿಯ ವಕೀಲ ರಜೆಂತ್ ಬಸಂತ್ ಅವರು ಸೇವ್ ನಿಮಿಷ ಪ್ರಿಯಾ ಆ್ಯಕ್ಷನ್ ಕೌನ್ಸಿಲ್ ಪರವಾಗಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮೃತ ಯೆಮೆನ್ ಪ್ರಜೆಯ ಕುಟುಂಬ ಹಣ ಪಡೆಯಲು ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಸ್ತುಸ್ಥಿತಿ ಕಾಯ್ದುಕೊಳ್ಳುವಂತೆ ಅಲ್ಲಿನ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿದೆ.