ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಅಭಯಾರಣ್ಯದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳ ಸಾವು ಪ್ರಕರಣ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ವನ್ಯಜೀವಿ ಅಭಯಾರಣ್ಯಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಮಲೆ ಮಹದೇಶ್ವರ ಅಭಯಾರಣ್ಯದಲ್ಲಿ ಕಳೆದ ತಿಂಗಳು ಒಂದು ಹುಲಿ ಮತ್ತು ನಾಲ್ಕು ಮರಿಗಳು ವಿಷ ಪ್ರಾಷನದಿಂದ ಮೃತಪಟ್ಟಿದ್ದವು. ಅರಣ್ಯಾಧಿಕಾರಿಗಳು ಮತ್ತು ಅರಣ್ಯ ವೀಕ್ಷಕರ ಹುದ್ದೆಗಳಲ್ಲಿ 80% ಖಾಲಿ ಇವೆ ಎಂದು ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಎಲ್ಲಾ ರಾಜ್ಯಗಳನ್ನು ಸೇರಿಸಿಕೊಂಡು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದೆ.
ಕರ್ನಾಟಕ ಸರ್ಕಾರದೊಂದಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸಿಜೆಐ ಭೂಷಣ್ ಆರ್ ಗವಾಯಿ ನೇತೃತ್ವದ ಪೀಠ ಸೂಚಿಸಿದೆ. ವನ್ಯಜೀವಿ ಮತ್ತು ಪರಿಸರ ಸಮಸ್ಯೆಗಳ ಕುರಿತು ನ್ಯಾಯಾಲಯಕ್ಕೆ ಸಹಾಯ ಮಾಡುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ ವರದಿಯನ್ನು ನ್ಯಾಯಾಲಯ ಪರಿಗಣಿಸಿದೆ. ಇದು ಒಂದೇ ಘಟನೆಯಲ್ಲಿ ವರದಿಯಾದ ಅತಿ ಹೆಚ್ಚು ಹುಲಿ ಸಾವುಗಳು ಎಂದು ಸಮಿತಿ ಹೇಳಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ರಚಿಸಿದ ವಿಶೇಷ ತನಿಖಾ ತಂಡದ ಸಂಶೋಧನೆಗಳನ್ನು ಕೇಂದ್ರೀಯ ಉನ್ನತಾಧಿಕಾರ ಸಮಿತಿ ಮಂಡಿಸಿದೆ. ಹುಲಿಗಳು ತಿಂದ ದನದ ಮೃತದೇಹದ ಮೇಲೆ ಕೀಟನಾಶಕ ಸಿಂಪಡಿಸಿದ ಗ್ರಾಮಸ್ಥರದ್ದು ಉದ್ದೇಶಪೂರ್ವಕ ಕೃತ್ಯ ಎಂದು ತೀರ್ಮಾನಿಸಿದೆ ಎಂದ ಕೋರ್ಟ್ ಹುಲಿಗಳ ಸಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.