Tuesday, December 23, 2025
Menu

ಟಿಟಿಡಿ ಮಾಜಿ ಅಧ್ಯಕ್ಷ, ಎಂಪಿಯಾಗಿದ್ದ ಆದಿಕೇಶವುಲು ನಾಯ್ಡು ಆಪ್ತನ ಸಾವು: ಆದಿಕೇಶವುಲು ನಾಯ್ಡು ಮಗಳು, ಮಗನ ಬಂಧನ

ತಿರುಮಲ ತಿರುಪತಿ ದೇವಸ್ಥಾನದ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು ಅವರ ಆಪ್ತ ಹಾಗೂ ಉದ್ಯಮಿ ರಘುನಾಥ್ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಅವರ ಮಗಳು ಕಲ್ಪಜ ಮತ್ತು ಮಗ ಶ್ರೀನಿವಾಸ್‌ ಅವರನ್ನು ಸಿಬಿಐ ಬಂಧಿಸಿದೆ.

ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿಗಳಾದ ಕಲ್ಪಜ ಮತ್ತು ಶ್ರೀನಿವಾಸ್‌ ಅವರನ್ನು 48ನೇ ಎಸಿಜೆಎಂ ನ್ಯಾಯಾಲಯ 7 ದಿನ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಹೆಚ್‌ಎಎಲ್‌ ಇನ್ಸ್‌ಪೆಕ್ಟರ್‌ ಮೋಹನ್‌ ಅವರನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ರಘುನಾಥ್‌ಗೆ ಸೇರಿದ ಆಸ್ತಿ ಸಂಬಂಧ ನಕಲಿ ಛಾಪಾಕಾಗದ ಮತ್ತು ನಕಲಿ ವಿಲ್ ಸೃಷ್ಟಿ ಮಾಡಿದ ಆರೋಪದಲ್ಲಿ ಸಿಬಿಐ ಆರೋಪಿಗಳನ್ನು ಬಂಧಿಸಿದೆ. ಬೆಂಗಳೂರು ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಬಳಿ ಗೆಸ್ಟ್ ಹೌಸ್‌ನಲ್ಲಿ 2019 ರ ಮೇ 14ರಲ್ಲಿ ರಘುನಾಥ್ ಮೃತಪಟ್ಟಿದ್ದರು. ರಘುನಾಥ್ ಬಳಿದ ಆಸ್ತಿಯನ್ನು ಶ್ರೀನಿವಾಸ್ ಮತ್ತು ಕಲ್ಪಜ ಬರೆಸಿಕೊಂಡ ಆರೋಪ ಕೇಳಿಬಂದಿತ್ತು.

ರಘುನಾಥ್ ಸಾವಿನ ಬಳಿಕ ಹೆಚ್‌ಎಎಲ್‌ ಪೊಲೀಸ್ ಠಾಣೆಗೆ ರಘುನಾಥ್ ಪತ್ನಿ ಮಂಜುಳ ದೂರು ನೀಡಿ, ಆದಿಕೇಶವುಲು ಮಕ್ಕಳಾದ ಶ್ರೀನಿವಾಸ್, ದಾಮೋದರ್, ರಾಮಚಂದ್ರಯ್ಯ ಮತ್ತು ಪ್ರತಾಪ್ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಎಸಿ ಕೋರ್ಟ್‌ನಲ್ಲಿ ನಕಲಿ ವಿಲ್‌ ಸಲ್ಲಿಕೆ ಮಾಡಿ ರಘುನಾಥ್ ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಹೆಚ್‌ಎಎಲ್‌ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದರು.

ಪೊಲೀಸರು ಸಲ್ಲಿಸಿದ್ದ ಪತ್ನಿ ಬಿ ರಿಪೋರ್ಟ್ ಪ್ರಶ್ನಿಸಿ ರಘುನಾಥ್‌ ಪತ್ನಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್‌ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಎಸ್‌ಐಟಿ ತನಿಖೆ ನಡೆಸಿ ಬಿ ರಿಪೋರ್ಟ್‌ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಮಂಜುಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು.

ಹೈಕೋರ್ಟ್‌ ಸಿಬಿಐ ತನಿಖೆಗೆ ನೀಡಿದ್ದ ಆದೇಶ ಪ್ರಶ್ನಿಸಿ ಅದೀಕೇಶವಲು ಕುಟುಂಬವರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪ್ರಕರಣವನ್ನು ಸಿಬಿಐಗೆ ನೀಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ತನಿಖೆ ನಡೆಸುವಂತೆ ಆದೇಶಿಸಿತ್ತು. ತನಿಖೆ ಆರಂಭಿಸಿದ ಚೆನ್ನೈ ಸಿಬಿಐ ಕೊಲೆ ಕೇಸ್‌ ದಾಖಲಿಸಿ ಶ್ರೀನಿವಾಸ್‌ ಮತ್ತು ಕಲ್ಪಜರನ್ನು ಬಂಧಿಸಿದೆ.

Related Posts

Leave a Reply

Your email address will not be published. Required fields are marked *