ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯನ್ನು ನವೆಂಬರ್ 3ಕ್ಕೆ ಮುಂದೂಡಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.
ದರ್ಶನ್ ಪರ ವಕೀಲರ ಮನವಿ ಆಲಿಸಿದ ನ್ಯಾಯಾಲಯ ನವೆಂಬರ್ 3ರಂದು ವಿಚಾರಣೆ ಮುಂದೂಡಿಕೆ ಮಾಡಿದೆ. ಪ್ರಕರಣದಲ್ಲಿ ದೋಷಾರೋಪಣೆ ನಿಗದಿಪಡಿಸಲು ದರ್ಶನ್, ಪವಿತ್ರಾಗೌಡ ಸೇರಿದಂತೆ 6 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಆರಂಭಿಸಿದ ದರ್ಶನ್ ಪರ ವಕೀಲರಾದ ಸುನೀಲ್, ”ತಮ್ಮ ಕಕ್ಷಿದಾರರಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ಆದ್ದರಿಂದ ಖುದ್ದಾಗಿ ಹಾಜರುಪಡಿಸಲು ಅನುಮತಿ ಕೊಡಬೇಕು. ಟ್ರಯಲ್ಗೂ ಮುನ್ನ 2 ವಾರ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ವಕೀಲರ ಭೇಟಿಗೆ ಅವಕಾಶ ಕಲ್ಪಿಸಲು ಸೂಚನೆ: ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ”ಜೈಲಿಗೆ ತೆರಳಿ ಸೂಚನೆಗಳನ್ನು ನೀಡುವಂತೆ” ದರ್ಶನ್ ಪರ ವಕೀಲರಿಗೆ ಸೂಚಿಸಿತು. ಅಲ್ಲದೇ, ವಕೀಲರ ಭೇಟಿಗೆ ಅವಕಾಶ ಕಲ್ಪಿಸುವಂತೆ ಜೈಲಧಿಕಾರಿಗಳಿಗೆ ನಿರ್ದೇಶನ ನೀಡಿತು. ಮತ್ತು ದೋಷರೋಪ ದಿನಾಂಕ ನಿಗದಿಯನ್ನು ನವೆಂಬರ್ 3ಕ್ಕೆ ಮುಂದೂಡಿತು.

 


