ತುಮಕೂರಿನ ಕೊರಟಗೆರೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೊಲೆಯಾಗಿರುವ ಮಹಿಳೆ ಲಕ್ಷ್ಮೀದೇವಮ್ಮನನ್ನು ಅಳಿಯನೇ ಹತ್ಯೆಗೈದು ಶವವನ್ನು ತುಂಡರಿಸಿ ಅಲ್ಲಲ್ಲಿ ಎಸೆದಿದ್ದಾನೆ ಎಂಬುದು ಪತ್ತೆಯಾಗಿದೆ.
ವೃತ್ತಿಯಲ್ಲಿ ದಂತ ವೈದ್ಯನಾಗಿರುವ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತಿದ್ದಳು ಎಂಬ ಆರೋಪ ಇದೆ. ಇದನ್ನು ಸಹಿಸದ ಅಳಿಯ ಡಾ.ರಾಮಚಂದ್ರ ಅತ್ತೆಯನ್ನೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸತೀಶ್ ಎಂಬಾತನ ಫಾರ್ಮ್ ಹೌಸ್ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ತುಂಡು ತುಂಡು ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಅತ್ತೆಯ ಕೊಲೆ ಆದರೂ ಅಳಿಯ ಇಲ್ಲದಿರುವುದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.