ನಾನು ಬಿಹಾರ ಚುನಾವಣೆಗೆ ಯಾವುದೇ ಹಣ ನೀಡಿಲ್ಲ. ಜೈಲಲ್ಲಿ ಇದ್ದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಿದ್ದರು. ನನಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರು ನನ್ನಿಂದ ಯಾವುದೇ ಸಹಿ ಹಾಕಿಸಿಕೊಂಡಿಲ್ಲ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದ್ದಾರೆ.
ನಮ್ಮ ದೇಶದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಇಡಿ ದಾಳಿ ವೇಳೆ ನನ್ನ ಮನೆಯಲ್ಲಿ ಹಣ ಸಿಗಲು ಸಾಧ್ಯವಿಲ್ಲ. ಕಂಪನಿಯಲ್ಲಿ ಸಿಕ್ಕಿರಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಇನ್ನೂ ಕಲಿಯುತ್ತಿದ್ದೇನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದಾರೆ, ಅವರಿಗೆ ಸಚಿವ ಸ್ಥಾನ ಸಿಗಬೇಕು. ಸಚಿವ ಸ್ಥಾನಕ್ಕಾಗಿ ನಾನು ಯಾರನ್ನೂ ಕೇಳಿಲ್ಲ ಎಂದರು.
ಜೈಲಿನಲ್ಲಿ ನಾನು ಮತ್ತು ದರ್ಶನ್ ಒಮ್ಮೆ ಭೇಟಿಯಾಗಿ ಎರಡು ನಿಮಿಷ ಮಾತನಾಡಿದ್ದೇವೆ. ಅವರು ಹಿಂದಿನಿಂದಲೂ ನನಗೆ ಪರಿಚಿತರು. ಹೀಗಾಗಿ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಅವರಿಗೆ ಜೈಲಿನಲ್ಲಿರುವ ಸೌಲಭ್ಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಬ್ಯಾರಕ್ ಬೇರೆ, ನನ್ನ ಬ್ಯಾರಕ್ ಬೇರೆ ಎಂದು ಹೇಳಿದರು.
ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರ ಸಭೆ ನಡೆಸಿದ ಶಾಸಕರು, ಕ್ಷೇತ್ರದ ಜನರು ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.


