ಉದಯಪುರ (ರಾಜಸ್ಥಾನ): “ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದು, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಕೇಂದ್ರ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
“ಈ ಸಮ್ಮೇಳನ ಎಲ್ಲಾ ರಾಜ್ಯಗಳ ಸಚಿವರುಗಳನ್ನು ಒಗಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗುತ್ತಿದೆ. ಇದರ ಜತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು” ಎಂದು ತಿಳಿಸಿದರು.
“ಈ ಸಮ್ಮೇಳನದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸಚಿವರುಗಳ ಜತೆ ಚರ್ಚೆ ಮಾಡಿದ್ದು, ತುಂಗಭದ್ರಾ ನದಿಯ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುತ್ತೇನೆ. ಇದಕ್ಕಾಗಿ ಮೂರು ರಾಜ್ಯಗಳ ಸೇರಿ ಕಾರ್ಯತಂತ್ರ ರೂಪಿಸಬೇಕಿದೆ” ಎಂದರು.
“ನೀರಾವರಿಯು ದೇಶದ ಪ್ರಮುಖ ಕ್ಷೇತ್ರವಾಗಿದ್ದು, ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಪ್ರಯಾಗರಾಜ್ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.